ರಾಜ್ಯ

ಚಿಕ್ಕಮಗಳೂರು: ಬಂಡೆಕಲ್ಲಿನಿಂದ ಜಾರಿ ಬಿದ್ದು ಆನೆ ಸಾವು

Sumana Upadhyaya
ಚಿಕ್ಕಮಗಳೂರು: ಇಲ್ಲಿನ ಗುಡ್ಡೆತೋಟದ ಸಮೀಪ ಕಾಫಿ ತೋಟದಲ್ಲಿ ಬಂಡೆ ಮೇಲೆ ಕಾಡಾನೆಯೊಂದು ಬಿದ್ದು ಮೃತಪಟ್ಟಿದೆ. 
ಚಿಕ್ಕಮಗಳೂರಿನ ಬಸಾಪುರ ಪ್ರದೇಶದ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಮೂರು ಕಾಡಾನೆಗಳು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಹಾನಿ ಮಾಡುತ್ತಿದ್ದವು. ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಇತ್ತೀಚೆಗೆ ಶೃಂಗೇರಿ ಶಾಸಕ ಟಿ ಡಿ ರಾಜೇ ಗೌಡ ಮನವಿ ಮಾಡಿಕೊಂಡಿದ್ದರು. ಕಾಡಾನೆಗಳನ್ನು ಭಯಪಡಿಸಿ ಎಂಬ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ಮಂಗಳವಾರದಿಂದ ಆರಂಭಿಸಿದ್ದರು.
ಮೊನ್ನೆ ಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತೆ ಕಾಫಿತೋಟ ಸುತ್ತಮುತ್ತ ಕಾಡಾನೆಗಳು ಕಾಣಿಸಿಕೊಂಡಿದ್ದವು. ಪಟಾಕಿಗಳನ್ನು ಸಿಡಿಸಿ ದೊಡ್ಡ ಶಬ್ದ ಮಾಡಿ ಅವುಗಳನ್ನು ಓಡಿಸಲು ನೋಡಿದ್ದರು, ಪಟಾಕಿ ಶಬ್ದಕ್ಕೆ ಕಾಡಾನೆಗಳು ಭೀತಿಯಿಂದ ಓಡಲು ಆರಂಭಿಸಿದವು. ಹೀಗೆ ಓಡುವಾಗ ಒಂದು ಆನೆ ಒದ್ದೆಯಾದ ಕಲ್ಲಿನ ಬಂಡೆಯಿಂದ ಜಾರಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. 
ಉಳಿದೆರಡು ಆನೆಗಳು ಈ ಪ್ರದೇಶದ ಸುತ್ತಮುತ್ತ ಓಡಾಡುತ್ತಿವೆ. ಉಳಿದೆರಡು ಆನೆಗಳು ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಆನೆ ಸತ್ತ ಜಾಗದ ಸುತ್ತಮುತ್ತ ಸುಳಿಯದಂತೆ ಅರಣ್ಯಾಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. 
SCROLL FOR NEXT