ಬೆಂಗಳೂರು: ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಬಂಧಿತನಾಗಿದ್ದ ಉಗ್ರ ಹಬೀಬುರ್ ವಾಸವಿದ್ದ ನಗರದ ಬಾಡಿಗೆ ಮನೆಯೊಂದರಲ್ಲಿ 7 ಬಾಂಬ್ಗಳು ಪತ್ತೆಯಾಗಿದೆ.
ಹಬಿಬುರ್ ರೆಹಮಾನ್ ವಾಸವಿದ್ದ ಬಾಡಿಗೆ ಮನೆ ಇದಾಗಿದ್ದು, ಏಳು ಬಾಂಬ್ಗಳ ಜತೆ ಒಂದು ಪಿಸ್ತೂಲ್ ಕೂಡ ಸಿಕ್ಕಿದೆ ಎಂದು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಮತ್ತು ಐಎಸ್ಡಿ (ಆಂತರಿಕ ಭದ್ರತಾ ವಿಭಾಗ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉಗ್ರನ ಬಗ್ಗೆ ಖಚಿತ ಮಾಹಿತಿ ತಿಳಿದ ಕೋಲ್ಕತದ ಎನ್ಐಎ ಅಧಿಕಾರಿಗಳು ಭಾನುವಾರ ರಾತ್ರಿ ಹೆಸರುಘಟ್ಟ ರಸ್ತೆಯಲ್ಲಿರುವ ಚಿಕ್ಕಬಾಣಾವರದ ಈತನ ಮನೆಯ ಮೇಲೆ ದಾಳಿ ನಡೆಸಿ ಬಾಂಬ್ ಹಾಗೂ ಪಿಸ್ತೂಲ್ನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಗಳ ಸಮಯಪ್ರಜ್ಞೆಯಿಂದ ನಗರದಲ್ಲಿ ಭಾರಿ ದುರಂತ ತಪ್ಪಿದೆ.
ಭಾನುವಾರ ಸಂಜೆ ಆರರ ವೇಳೆಗೆ ದಿಡೀರ್ ದಾಳಿ ನಡೆಸಿದ ತನಿಖಾ ತಂಡ ರಾತ್ರಿಯೆಲ್ಲಾ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.
ಮುಸ್ತಾನ್ ಎಂಬುವವರ ಮಾಲಿಕತ್ವವಿದ್ದ ಈ ಮನೆಯಲ್ಲಿ ಎರಡು ವರ್ಷಗಳ ಹಿಂದೆ ಚಿಕ್ಕಬಾಣಾವರಕ್ಕೆ ಆಗಮಿಸಿದ್ದ ಹಬಿಬುರ್ ಸೇರಿ ಮೂವರು ಶಂಕಿತರು ವಾಸವಿದ್ದರು. ಅವರು ಇಲ್ಲಿಯೇ ಬಾಂಬ್ ತಯಾರಿ ಮಾಡುತ್ತಿದ್ದರು. ಕೇವಲ ಒಂದೂವರೆ ತಿಂಗಳ ಹಿಂದೆ ಮನೆ ಖಾಲಿ ಮಾಡಿ ಹೋಗಿದ್ದರೆಂದು ಮೂಲಗಳು ಹೇಳಿದೆ.
ಇದೀಗ ಆ ಮೂವರೂ ಎನ್ಐಎ ಬಲೆಗೆ ಬಿದ್ದಿದ್ದಾರೆ. ಬಳೆ ಮಾರಾಟಗಾರರೆಂದು ಹೇಳಿಕೊಂಡು ಮನೆ ಬಾಡಿಗೆಗೆ ಪಡೆದಿದ್ದ ಇವರು ನೆರೆ ಹೊರೆಯವರಿಗೂ ಸಹ ಇದನ್ನೇ ಹೇಳಿ ನಂಬಿಸಿದ್ದರೆನ್ನಲಾಗಿದೆ. ಉಗ್ರರು ತಯಾರಿಸಿದ್ದ ಬಾಂಬ್ ಗಳನ್ನು ಟಿಫಿನ್ ಬಾಕ್ಸ್ ನಲ್ಲಿ ಹಾಕಿ ಇಡಲಾಗಿತ್ತು. ದಾಳಿ ನಡೆಸಿದ ಅಧಿಕಾರಿಗಳು ಸ್ಪೋಟಕ ಸಾಮಗ್ರಿಯನ್ನು ಬಾಕ್ಸ್ ನಲ್ಲಿ ತುಂಬಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ.