ರಾಜ್ಯ

ಬೆಂಗಳೂರು: 5 ವರ್ಷದ ಬಾಲಕನ ಕೊಲೆಗೆ ಅಪ್ಪನಿಂದಲೇ ಸುಪಾರಿ, ರೌಡಿ ಬಂಧನ

Lingaraj Badiger
ಬೆಂಗಳೂರು: ಐದು ವರ್ಷದ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ ರೌಡಿಯನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಾಗಡಿ ರೋಡ್ ಪೊಲೀಸ್ ಠಾಣೆ ರೌಡಿ ಮಹೇಶ್(37) ಹಾಗೂ ಬಾಲಕನ ತಂದೆ ಜಯಪ್ಪ(36) ಬಂಧಿತರು. 
ಬೆಂಗಳೂರು ನಗರದ ರೌಡಿಗಳ ಚಲನ ವಲನಗಳ ಮೇಲೆ ಸಿಸಿಬಿ ಸಂಘಟಿತ ಅಪರಾಧ ದಳ ನಿಗಾವಹಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಮಹೇಶ್ ಗೆ ಒಂದು ತಿಂಗಳ ಹಿಂದೆ ಗಾರೆ ಕೆಲಸ ಮಾಡುವ ಜಯಪ್ಪ ಎಂಬಾತನ(36 ) ಪರಿಚಯವಾಗಿತ್ತು. ಆಗ ಜಯಪ್ಪ, ತನಗೆ 4 ಜನ ಮಕ್ಕಳು, ಅದರಲ್ಲಿ 3ನೇ ಮಗು ಬಸವರಾಜು(5 ವರ್ಷ) ಅಂಗವಿಕಲನಾಗಿದ್ದು, ಮಾತನಾಡಲು ಮತ್ತು ನಡೆದಾಡಲು ಅಶಕ್ತನಾಗಿದ್ದಾನೆ. ಮಗುವಿಗೆ ನಿಮಾನ್ಸ್ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗಿಲ್ಲ. ಈಗಾಗಲೇ ಚಿಕಿತ್ಸೆಗಾಗಿ ಸುಮಾರು ಹಣ ಖರ್ಚು ಮಾಡಿದ್ದು, ಇನ್ನು ಮುಂದೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣವಿಲ್ಲ ಏನಾದರೂ ಮಾಡಬೇಕು ಎಂದು ತಿಳಿಸಿದ್ದ.
ನಂತರ ಮಹೇಶ್, ಇಂಜೆಕ್ಷನ್ ಕೊಟ್ಟು ಮಗುವನ್ನು  ಸಾಯಿಸುವುದಾಗಿ ತಿಳಿಸಿ, 50 ಸಾವಿರ ರೂ. ಬೇಡಿಕೆ ಇಟ್ಟಿದ್ದ. ಕೆಲಸ ಮುಗಿಸಿದ ಮೇಲೆ ಹಣ ಕೊಡುವುದಾಗಿ ಮಗುವಿನ ತಂದೆ ಜಯಪ್ಪ ತಿಳಿಸಿದ್ದ. ಆರೋಪಿ ಮಹೇಶ್, ಜಯಪ್ಪನ ಮನೆಯಲ್ಲಿಯೇ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮಗುವಿನ ತಂದೆ ಮಗುವನ್ನು ಗೊರಗುಂಟೆ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಮಗುವಿನ ಶವಸಂಸ್ಕಾರ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಸಂಘಟಿತ ಅಪರಾಧ ದಳದವರು ಆರೋಪಿಗಳಾದ ಮಹೇಶ್ ಮತ್ತು ಜಯಪ್ಪ ಅವರನ್ನು ಬಂಧಿಸಿ ಪ್ರಕರಣವನ್ನು ಭೇದಿಸಿ, ಆರೋಪಿಗಳನ್ನು ನಂದಿನಿಲೇಔಟ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
SCROLL FOR NEXT