ಶಿಥಿಲಾವಸ್ಥೆ ತಲುಪಿದ್ದ ಸರ್ಕಾರಿ ಶಾಲೆಗೆ 'ಸ್ಮಾರ್ಟ್' ರೂಪ ನೀಡಿದ ಎನ್ ಆರ್ ಐ ಕುಟುಂಬ!
ಬೆಂಗಳೂರಿನ ಹೊರಭಾಗದ್ಲಲಿರುವ ಈ ಶಾಲೆಯನ್ನು ಹೊರಭಾಗದಿಂದ ನೋಡಿದರೆ ಈ ಶಾಲೆ ಯಾವುದೋ ಅಂತಾರಾಷ್ಟ್ರೀಯ ಶಾಲೆಯ ಮಾದರಿಯಲ್ಲಿ ಕಾಣುತ್ತೆ. ಎಲ್ಲಾ ಆಧುನಿಕ ಉಪಕರಣ, ಸೌಲಭ್ಯಗಳೂ ಈ ಶಾಲೆಯಲ್ಲಿ ಲಭ್ಯ. ಆದರೆ ಇದು ಸರ್ಕಾರಿ ಶಾಲೆ ಎಂದರೆ ನೀವು ನಂಬಲೇಬೇಕು.
ಇದು ನಗರದಿಂದ 30 ಕಿ.ಮೀ ದೂರದಲ್ಲಿರುವ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನವರತ್ನ ಅಗ್ರಹಾರದಲ್ಲಿರುವ ಸರ್ಕಾರಿ ಶಾಲೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಈ ರೀತಿ ಅಭಿವೃದ್ಧಿ ಪಡಿಸಿದ್ದು, ಅನಿವಾಸಿ ಭಾರತೀಯ ಕುಟುಂಬ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿ.
ದುಬೈ ನಲ್ಲಿರುವ ಅನಿವಾಸಿ ಭಾರತೀಯರಾದ ರೊನಾಲ್ಡ್ ಕೊಲಾಸೋ ನೆರವಿನಿಂದ ಸುಮಾರು 12,000 ಚದರ ಅಡಿ ವಿಸ್ತೀರ್ಣದಲ್ಲಿ, 3.1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಶಾಲೆ ನಿರ್ಮಾಣವಾಗಿದ್ದು, ಹಳೆಯ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ಹೊಸದಾಗಿ ನಿರ್ಮಿಸಲಾಗಿದೆ.
ಈ ಸರ್ಕಾರಿ ಶಾಲೆಯ ಬಳಿಯೇ ರೊನಾಲ್ಡ್ ಕೊಲಾಸೋ ಅವರ ಮನೆ ಇದೆ. ಗ್ರಾಮಸ್ಥರು ತಮ್ಮ ಮಕ್ಕಳ ಖಾಸಗಿ ಶಾಲೆಯ ಶುಲ್ಕ ಪಾವತಿಸುವುದಕ್ಕೆ ನೆರವು ಕೋರಿ ಇವರ ಬಳಿ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಸರ್ಕಾರಿ ಶಾಲೆಯನ್ನೇ ಅಂತಾರಾಷ್ಟ್ರೀಯ ದರ್ಜೆಯ ಖಾಸಗಿ ಶಾಲೆ ಸೌಲಭ್ಯಗಳನ್ನು ನೀಡಿ ಮರು ನಿರ್ಮಾಣ ಮಾಡಲಾಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ರೊನಾಲ್ಡ್ ಕೊಲಾಸೋ ಹೇಳಿದ್ದಾರೆ.
ಶಾಲೆಯ ನಿರ್ಮಾಣದ ಉಸ್ತುವಾರಿಯನ್ನು ರೊನಾಲ್ಡ್ ಕೊಲಾಸೋ ಅವರ ಪುತ್ರ ನಿಗೆಲ್ ಕೊಲಾಸೋ ವಹಿಸಿಕೊಂಡಿದ್ದರು. 11 ಸುಸಜ್ಜಿತ ತರಗತಿ ಕೊಠಡಿಗಳು, 31 ಸಿಸಿಟಿವಿ ಕ್ಯಾಮರಗಳು, ಪಾಕಶಾಲೆ, ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೆ ಪ್ರತ್ಯೇಕ ಸ್ಥಳ, ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ಹೀಗೆ ಅಂತಾರಾಷ್ಟ್ರೀಯ ದರ್ಜೆ ಶಾಲೆಯ ಸೌಲಭ್ಯವನ್ನು ಈ ಶಾಲೆ ಹೊಂದಿದೆ.
7 ನೇ ತರಗತಿ ವರೆಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಲಭ್ಯವಿದ್ದು, ರೊನಾಲ್ಡ್ ಕೊಲಾಸೋ ನೆರವಿನಿಂದ ನಿರ್ಮಿಸಲಾಗಿರುವ ಶಾಲೆಯನ್ನು ಜು.26 ರಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಹಾಗೂ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos