ರಾಜ್ಯ

ಬೆಂಗಳೂರು: ರೈಲ್ವೆ ನಿಲ್ದಾಣಗಳಲ್ಲಿ ಖದೀಮರಿಗೆ ಕಂಟ್ರ್ಯಾಕ್ಟರ್ ಸಾಥ್, ತನಿಖೆಯಿಂದ ಬಹಿರಂಗ!

Sumana Upadhyaya
ಬೆಂಗಳೂರು: ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಲೂಟಿ ಮಾಡುವ ದರೋಡೆಕೋರರಿಗೆ ರೈಲ್ವೆ ಗುತ್ತಿಗೆದಾರನೊಬ್ಬ ಹಲವು ಸಮಯಗಳಿಂದ ಸಹಾಯ ಮಾಡುತ್ತಿದ್ದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿನ ಯಶವಂತಪುರ ಮತ್ತು ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾಗಳಲ್ಲಿ ದರೋಡೆ ಮಾಡುವಾಗಿನ ದೃಶ್ಯಗಳು ಸೆರೆಯಾಗದಂತೆ ನೋಡಿಕೊಳ್ಳುವ ಮೂಲಕ ಗುತ್ತಿಗೆದಾರ ದರೋಡೆಕೋರರಿಗೆ ಸಹಾಯ ಮಾಡುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ರೈಲ್ವೆ ರಕ್ಷಣಾ ಪಡೆಯ ಮೂಲಗಳು, ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ನಿರ್ವಹಿಸುತ್ತಿದ್ದ ಗುತ್ತಿಗೆದಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಕೇಬಲ್ ಗಳನ್ನು ದರೋಡೆಕೋರರು ದರೋಡೆ ಮಾಡುವ ಸಂದರ್ಭದಲ್ಲಿ ಸ್ವಿಚ್ ಆಫ್ ಮಾಡುತ್ತಿದ್ದ, ಇಲ್ಲವೇ ಸಿಸಿಟಿವಿ ಕ್ಯಾಮರಾದ ಕೋನಗಳನ್ನು ಪ್ಲಾಟ್ ಫಾರಂನಿಂದ ರೈಲು ಹೊರಡುವ ಮೊದಲು ಬದಲಾಯಿಸುತ್ತಿದ್ದ. ಇದರಿಂದ ನಿಜವಾದ ದರೋಡೆಕೋರರು ಅಥವಾ ಕಳ್ಳರ ಗುರುತು ಸಿಗುವುದಿಲ್ಲ ಎಂದರು.ದೀರ್ಘ ಪ್ರಯಾಣದ ರೈಲುಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ ಎನ್ನುತ್ತಾರೆ ಪೊಲೀಸರು.
ಕಳೆದ ಏಪ್ರಿಲ್ ತಿಂಗಳಲ್ಲಿ ಯಶವಂತಪುರದಿಂದ ಹೊರಟ ರೈಲಿನಲ್ಲಿ ಪ್ರಯಾಣಿಕರ ಮೇಲೆ ನಡೆದ ನಾಲ್ಕು ದರೋಡೆ ಪ್ರಕರಣಗಳ ನಂತರ ನಡೆಸಲಾದ ತನಿಖೆ ವೇಳೆ ಈ ಮಾಹಿತಿ ಹೊರಬಿದ್ದಿದೆ. ಗುತ್ತಿಗೆದಾರ ಸೇರಿದಂತೆ ಉತ್ತರ ಪ್ರದೇಶದ ಗೊಂಡಾ ಗ್ರಾಮದ ಐದು ಮಂದಿ ಗ್ಯಾಂಗ್ ವಿರುದ್ಧ ರೈಲ್ವೆ ಪೊಲೀಸರು ಕೇಸು ದಾಖಲಿಸಿದ್ದಾರೆ. ತನಿಖೆ ಮುಗಿಯುವವರೆಗೆ ಗುತ್ತಿಗೆದಾರನ ಹೆಸರನ್ನು ಪೊಲೀಸರು ಬಹಿರಂಗಪಡಿಸುವುದಿಲ್ಲ.
ದರೋಡೆ ವಿಧಾನ: ರೈಲ್ವೆ ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕಾಯ್ದಿರಿಸಿದ ಬೋಗಿಗಳಿಗೆ ಹತ್ತಿ ಪ್ರಯಾಣಿಕರ ಜೊತೆ ಸ್ನೇಹದಿಂದ ವರ್ತಿಸುವ ದರೋಡೆಕೋರರು ಮತ್ತು ಭರಿಸುವ ಪಾನೀಯಗಳನ್ನು ಮತ್ತು ಸ್ನಾಕ್ಸ್ ಗಳನ್ನು ನೀಡಿ ಸ್ವಲ್ಪ ಹೊತ್ತು ಕಳೆದ ನಂತರ ದರೋಡೆ ಮಾಡಿ ಇಳಿದು ಹೋಗುತ್ತಾರೆ. ಇದು ಕಳೆದೊಂದು ದಶಕದಿಂದ ರೈಲ್ವೆ ನಿಲ್ದಾಣದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ರೈಲ್ವೆ ಭದ್ರತಾ ಸಿಬ್ಬಂದಿ ವಿಡಿಯೊ ಮಾಡಿ ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಈ ಹಿಂದೆ ದರೋಡೆಗೊಳಗಾದ ಪ್ರಯಾಣಿಕರಿಗೆ ವಿಡಿಯೊ ತೋರಿಸಿದಾಗ ಕೆಲವರನ್ನು ಗುರುತು ಹಿಡಿದಿದ್ದಾರೆ.
ಪ್ರಯಾಣಿಕರೊಬ್ಬರಿಗೆ ವಿಡಿಯೊ ತೋರಿಸಿದಾಗ ದರೋಡೆಕೋರರನ್ನು ಗುರುತು ಹಿಡಿದರು. ಅದರಿಂದ ನಮಗೆ ಮಹತ್ವದ ಮಾಹಿತಿ ಸಿಕ್ಕಿ ನಾವು ಕಣ್ಣಿಟ್ಟು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕಳೆದ ತಿಂಗಳು ದರೋಡೆ ಗ್ಯಾಂಗನ್ನು ಬಂಧಿಸಿದೆವು. ನಂತರ ಅವರ ಫೋನ್ ಮತ್ತು ವಾಟ್ಸಾಪ್ ಗಳನ್ನು ಪರಿಶೀಲಿಸಿದಾಗ ಅವರು ಯಾವತ್ತೂ ಸಂಭಾಷಣೆ ನಡೆಸುತ್ತಿದ್ದ ವ್ಯಕ್ತಿಯ ಫೋಟೋ ಸಿಕ್ಕಿತು. ಅದನ್ನು ನಮ್ಮ ಗುಂಪಿಗೆ ಕಳುಹಿಸಿದಾಗ ಅದು ರೈಲ್ವೆ ಗುತ್ತಿಗೆದಾರನ ಫೋಟೋ ಆಗಿತ್ತು ಎನ್ನುತ್ತಾರೆ ಪೊಲೀಸ್ ಮೂಲಗಳು.
SCROLL FOR NEXT