ರಾಜ್ಯ

ಜಿಂದಾಲ್ ಗೆ ಸರ್ಕಾರ ಭೂಮಿ ಮಾರಾಟದಲ್ಲಿ ಸಚಿವರ ಹಿತಾಸಕ್ತಿ ಅಡಗಿದೆ: ಸಂಸದೆ ಶೋಭಾ ಕರಂದ್ಲಾಜೆ

Sumana Upadhyaya
ಬೆಂಗಳೂರು: ಕೋಟ್ಯಂತರ ರೂಪಾಯಿ ಬೆಲೆ ಬಾಳುವ 3,600 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ, ಇದರ ಹಿಂದೆ ಕೈಗಾರಿಕಾ ಸಚಿವ ಕೆ ಜೆ ಜಾರ್ಜ್ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರ ಸ್ವ ಹಿತಾಸಕ್ತಿ ಅಡಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಜಿಂದಾಲ್ ಸಂಸ್ಥೆ ಎಂಎಸ್ ಐಎಲ್ ಮತ್ತು ಸರ್ಕಾರಕ್ಕೆ 10,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಯಾವುದೇ ಷರತ್ತುಗಳನ್ನು ಜಿಂದಾಲ್ ಸಂಸ್ಥೆ ಪಾಲಿಸಿಲ್ಲ. ಈಗ 3,600 ಎಕರೆಯನ್ನು ಮಾರಾಟ ಮಾಡಲು ಸರ್ಕಾರ ಹೊರಟಿದೆ. ಈ ಭೂಮಿಯಲ್ಲಿ ಅತ್ಯಂತ ಬೆಲೆಬಾಳುವ ಕಬ್ಬಿಣದ ಅದಿರಿನ ನಿಕ್ಷೇಪವಿದೆ, ಇದಕ್ಕಾಗಿಯೇ ಡಿ ಕೆ ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ ಎಂದು ಆರೋಪಿಸಿದರು.
ಅಂದು ಬಳ್ಳಾರಿ ಗಣಿ ಭೂಮಿ ಉಳಿಸುತ್ತೇನೆ ಎಂದು ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಏಕೆ ಮೌನವಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಯಾಕಾಗಿ ಮೌನಕ್ಕೆ ಶರಣಾಗಿದ್ದಾರೆ. ಹೆಚ್.ಕೆ.ಪಾಟೀಲ್, ವಿಶ್ವನಾಥ್ ವಿರೋಧದ ನಡುವೆಯೂ ಜಿಂದಾಲ್ ಗೆ ಭೂಮಿ ಕ್ರಯ ಏಕೆ ಮಾಡಿಕೊಡಬೇಕು. 
ಬಳ್ಳಾರಿಯಲ್ಲಿ ನೀರಿನ ಹಾಹಾಕಾರವಿದೆ. ಆದರೆ ಸರ್ಕಾರ ಜಿಂದಾಲ್ ಜತೆ 2 ಟಿಎಂಸಿ ನೀರು ಕೊಡುವ ಒಪ್ಪಂದ ಮಾಡಿಕೊಂಡಿದೆ, ಆದರೆ ಅಕ್ರಮವಾಗಿ 5 ಟಿಎಂಸಿ ನೀರು ಕೊಡಲಾಗುತ್ತಿದೆ. ಇದರ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
SCROLL FOR NEXT