ರಾಜ್ಯ

#WeNeedEmergencyHospitalInKodagu: ಮುಖ್ಯಮಂತ್ರಿಗಳೇ ಕೊಡಗಿಗೂ ಬೇಕಿದೆ ತುರ್ತು ಸೇವೆಗಳ ಆಸ್ಪತ್ರೆ

Srinivas Rao BV
ಕೊಡಗು: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದೂ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯಕ್ಕಾಗಿ ಸಾಮಾಜಿಕ ಅಭಿಯಾನ ಪ್ರಾರಂಭವಾಗಿತ್ತು. ತುರ್ತು ಸೇವೆಗಳಿಗಾಗಿ ಸರ್ಕಾರಿ ಆಸ್ಪತ್ರೆ ಸೇವೆಯ ವಿಷಯದಲ್ಲಿ ಕೊಡಗಿನ ಪರಿಸ್ಥಿತಿಯೇನು ಭಿನ್ನವಾಗಿಲ್ಲ. 
5 ಲಕ್ಷಕ್ಕೂ ಮೀರಿದ ಜನಸಖ್ಯೆಯಿರುವ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಗಳ ಪರಿಸ್ಥಿತಿ ಶೀತ-ಜ್ವರಕ್ಕೆ ಮದ್ದು ನೀಡುವ ಹಂತದಿಂದ ಇನ್ನೂ ಮೇಲ್ದರ್ಜೆಗೆ ಏರಿಲ್ಲ. ಇನ್ನು ಜೀವ ಉಳಿಸುವ ತುರ್ತು ಸೇವೆಗಳು ತಕ್ಷಣದಲ್ಲಿ ಸಿಗುವುದಂತೂ ದೂರದ ಮಾತು. ಕೊಡಗಿನ ಜನರು ಜೀವ ಉಳಿಸುವ ತುರ್ತು ಅಗತ್ಯವಿದೆ ಎಂದಾಗಲೂ ಮೈಸೂರು ಅಥವಾ ಮಂಗಳೂರಿಗೆ ಓಡಬೇಕು. 
ಕೊಡಗಿನಲ್ಲಿ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳು ಒಂದೋ ಅಥವಾ ಎರಡೋ ಇದೆ.  ಆ ಆಸ್ಪತ್ರೆಗಳೂ ಸಹ ಹೆಚ್ಚು ಜನರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಜನರಿಗೆ ಸುಲಭವಾಗಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯ. 
"ಜಿಲ್ಲೆಯ ರಾಜಕಾರಣಿಗಳೇ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕೊಡಗು ಅತಿ ಹೆಚ್ಚು ಆದಾಯ ಗಳಿಸುವ ಜಿಲ್ಲೆಗಳ ಪಟ್ಟಿಯಲ್ಲಿದೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ತುರ್ತು ಸೇವೆಗಳ ಅಗತ್ಯವಿದೆ ಎಂದರೂ ಇಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯ, ಟ್ರಾಮ ಕೇರ್ ಸೆಂಟರ್ ಕೂಡ ಇಲ್ಲದಂತಾಗಿದೆ. ತುರ್ತಾಗಿ ಚಿಕಿತ್ಸೆ ಕೊಟ್ಟರೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳಿಸಲಾಗುತ್ತದೆ. ಮಾರ್ಗ ಮಧ್ಯದಲ್ಲೇ ರೋಗಿಗಳು ಮೃತಪಟ್ಟಿರುವ ಉದಾಹರಣೆಗಳಿದ್ದು, ಕೊಡಗಿಗೆ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಸೌಲಭ್ಯವಿರುವ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ".
-ದೀಪಕ್ ದೇವಯ್ಯ 
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ನಲ್ಲಿ 400 ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕಾಗಿ ಅನುದಾನವನ್ನು ಘೋಷಿಸಿದ್ದರು. ಆದರೆ ಈ ರೀತಿಯ ಆಸ್ಪತ್ರೆ ಕೊಡಗಿಗೆ ಸಾಲುವುದಿಲ್ಲ. ಜಿಲ್ಲೆಗೆ ಸುಸಜ್ಜಿತ ಸ್ಪೆಷಾಲಿಟಿ ಆಸ್ಪತ್ರೆ ಅನಿವಾರ್ಯ ಎಂಬುದು ಸ್ಥಳೀಯರ ಆಗ್ರಹವಾಗಿದೆ. 
ಜೂ.12 ರಂದು ಸಂಜೆ 6:00 ಗಂಟೆಗೆ #WeNeedEmergencyHospitalInKodagu ಹ್ಯಾಷ್ ಟ್ಯಾಗ್ ನ್ನು ಬಳಸಿ ಸಾರ್ವಜನಿಕರು ಟ್ವೀಟ್ ಮಾಡುವ ಮೂಲಕ ಕೊಡಗಿನ ಆಗ್ರಹಕ್ಕೆ
ಧ್ವನಿಯಾಗೋಣ.
-ಶ್ರೀನಿವಾಸ್ ರಾವ್
srinivasrao@newindianexpress.com
SCROLL FOR NEXT