ರಾಜ್ಯ

ಹೂಡಿಕೆದಾರರಿಗಷ್ಟೇ ಅಲ್ಲ, ಉದ್ಯೋಗಿಗಳಿಗೆ ಕೂಡ ಕಾಡುತ್ತಿರುವ ಐಎಂಎ ಹಗರಣ

Sumana Upadhyaya
ಬೆಂಗಳೂರು: ನಾನು ನಿದ್ದೆ ಮಾಡದೆ ನಾಲ್ಕು ದಿನ ಆಯ್ತು. ಪ್ರತಿ ಗಳಿಗೆಯಲ್ಲಿ ನನ್ನ ಮನಸ್ಸಿನಲ್ಲಿ ಆತ್ಮಹತ್ಯೆಯ ವಿಷಯ ಬಂದು ಹೋಗುತ್ತದೆ. ನಾನು ಉದ್ಯೋಗ ಕಳೆದುಕೊಂಡಿದ್ದು ಮಾತ್ರವಲ್ಲದೆ ಐಎಂಎ ಸಂಸ್ಥೆಯಲ್ಲಿ ಹೂಡಿದ್ದ ಹಣವನ್ನು ಕೂಡ ಕಳೆದುಕೊಂಡೆ. ನನ್ನ ಸಂಬಂಧಿಕರು ಸುಮಾರು 30 ಮಂದಿ ಹೂಡಿರುವ ಹಣಕ್ಕೆ ಸಹ ನಾನೇ ಜವಾಬ್ದಾರನಾಗಿದ್ದೇನೆ ಎನ್ನುತ್ತಾರೆ ಅಫ್ಸಾನ್ ಬಾನು(ಹೆಸರು ಬದಲಿಸಲಾಗಿದೆ). ಐಎಂಎ ಜ್ಯುವೆಲ್ಸ್ ನಲ್ಲಿರುವ ಸುಮಾರು 200 ಉದ್ಯೋಗಿಗಳಲ್ಲಿ ಅಫ್ಸನ್ ಕೂಡ ಒಬ್ಬರು.
ಇವರಂತೆ ನೂರಾರು ಉದ್ಯೋಗಿಗಳು ತಮಗೆ ನ್ಯಾಯ ಕೊಡಿಸಿ, ಹೂಡಿರುವ ದುಡ್ಡನ್ನು ವಾಪಸ್ ಕೊಡಿಸಿ ಎಂದು ಪೊಲೀಸರ ಮೊರೆ ಹೋಗುತ್ತಿದ್ದಾರೆ.ಕಂಪೆನಿಯ ಹೆಚ್ ಆರ್ ಟೀಮ್ ಬಳಿ ಐಎಂಎ ಉದ್ಯೋಗಿಗಳ ಮೂಲ ದಾಖಲೆಪತ್ರ ಇರುವುದರಿಂದ ಅವರಿಗೆ ಚಿಂತೆ, ಭಯ ಕಾಡಲಾರಂಭಿಸಿದೆ. ತಮಗೆ ನ್ಯಾಯ ಕೊಡಿಸಿ ಎಂದು ನಗರ ಪೊಲೀಸ್ ಆಯುಕ್ತರ ಬಳಿ ಸುಮಾರು 50 ಐಎಂಎ ಉದ್ಯೋಗಿಗಳು ಮತ್ತು ಮ್ಯಾನೇಜರ್ ಗಳು ದೂರು ಸಲ್ಲಿಸಿದ್ದಾರೆ.
ಜಯನಗರ ಶೋರೂಂನ ಐಎಂಎ ವ್ಯವಸ್ಥಾಪಕ, ನಾವು ಸಿಟಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಬೇಕೆಂದು ಹೋಗಿದ್ದೆವು. ಆದರೆ ಅವರು ಸಿಗದೆ ಅಲ್ಲಿ ಹಿರಿಯ ಅಧಿಕಾರಿಯೊಬ್ಬರ ಬಳಿ ದೂರು ಸಲ್ಲಿಸಿದ್ದೇವೆ, ಅವರಿಗೆ ಸಹ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದರು.
ತಮ್ಮ ಮೂಲ ದಾಖಲೆಪತ್ರಗಳು ಐಎಂಎ ಜ್ಯುವೆಲ್ಸ್ ಬಳಿ ಇರುವುದರಿಂದ ಉದ್ಯೋಗಿಗಳಿಗೆ ಬೇರೆ ಕಡೆ ಉದ್ಯೋಗ ಹುಡುಕಲು ಸಹ ಸಾಧ್ಯವಾಗುತ್ತಿಲ್ಲ. ನಮ್ಮಂತಹ 30-35 ಮಹಿಳೆಯರಿದ್ದಾರೆ. ಅವರಿಗೆಲ್ಲ ಎಲ್ಲಾದರೂ ಕೆಲಸ ಕೊಡಿಸಿ, ಅವರಲ್ಲಿ ಕೆಲವರು ಸಿಂಗಲ್ ಪೇರೆಂಟ್ ಆಗಿದ್ದಾರೆ. ಅವರಲ್ಲಿ ಒಬ್ಬೊಬ್ಬರಿಗೆ ಇಬ್ಬರು-ಮೂವರು ಮಕ್ಕಳಿದ್ದಾರೆ, ಅವರೆಲ್ಲ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾರೆ ರತ್ನಾ ಜಿ.
ಈ ಮಧ್ಯೆ ಕೆಲವು ಉದ್ಯೋಗಿಗಳು ತಮ್ಮ ವೇತನ ರಶೀದಿ ಹಿಡಿದುಕೊಂಡು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕಳೆದ ತಿಂಗಳವರೆಗೆ ಮಾತ್ರ ನಮಗೆ ವೇತನ ಸಿಕ್ಕಿದೆ, ಈ ತಿಂಗಳು ಬಂದಿಲ್ಲವೆನ್ನುತ್ತಾರೆ.
SCROLL FOR NEXT