ರಾಜ್ಯ

ಜೂನ್‌ 23ರಂದು ಕರ್ನಾಟಕಕ್ಕೆ ಹಣಕಾಸು ಆಯೋಗ ಭೇಟಿ

Lingaraj Badiger
ನವದೆಹಲಿ: ಎನ್.ಕೆ. ಸಿಂಗ್ ನೇತೃತ್ವದ 15ನೇ ಹಣಕಾಸು ಆಯೋಗ ಜೂನ್ 23 ರಿಂದ 26 ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಲಿದೆ.
ಭೇಟಿಯ ಭಾಗವಾಗಿ ಆಯೋಗ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು, ರಾಜ್ಯದ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದೆ.
ರಾಜ್ಯದ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಸಹ ಆಯೋಗ ಭೇಟಿ ಮಾಡಲಿದೆ. ಅಲ್ಲದೆ, ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿದಿಗಳೊಂದಿಗೆ ಆಯೋಗ ಪ್ರತ್ಯೇಕ ಸಭೆ ನಡೆಸಲಿದೆ. 
ನೇರ ನಗದು ವರ್ಗಾವಣೆ ಮತ್ತು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು ಸಾಧನೆ ಆಧಾರಿತ ಪ್ರೋತ್ಸಾಹಧನ ಕುರಿತು ಹಣಕಾಸು ಆಯೋಗ, ಹಿರಿಯ ಅರ್ಥಶಾಸ್ತ್ರಜ್ಞರು ಹಾಗೂ ನಂದನ್ ನಿಲೇಕಣಿ ಸೇರಿದಂತೆ ಮಾಹಿತಿ ತಂತ್ರಜ್ಞಾನ ತಜ್ಞರೊಂದಿಗೆ ಸಂವಾದ ನಡೆಸಲಿದೆ. 
ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೋದ್ಯಮದ ಪ್ರತಿನಿಧಿಗಳೊಂದಿಗೂ ಆಯೋಗ ಸಭೆ ನಡೆಸಲಿದೆ. 
ರಾಜ್ಯದ ಭೇಟಿಯ ವೇಳೆ ಆಯೋಗ, ವಿಪತ್ತು ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ದೇಶದಲ್ಲೇ ಮೊದಲ ಬಾರಿ ಸ್ಥಾಪನೆಯಾಗಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲುಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ)ಕ್ಕೂ ಭೇಟಿ ನೀಡಲಿದೆ.
ಸಂಚಾರ ನಿರ್ವಹಣೆ, ಬೆಂಗಳೂರು ನಗರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರೋಪಾಯಗಳನ್ನು ಅರ್ಥೈಸಿಕೊಳ್ಳಲು ಬೆಂಗಳೂರು ನಗರ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಲು ಆಯೋಗ ಉದ್ದೇಶಿಸಿದೆ. 
ಹಣಕಾಸು ಆಯೋಗವು ಬೆಂಗಳೂರಿನ 'ಬಾಷ್' ಕೇಂದ್ರಕ್ಕೂ ಭೇಟಿ ನೀಡಲಿದೆ. ಬಾಷ್, ಬೆಂಗಳೂರಿನ ಅತ್ಯಂತ ಹಳೆಯ ಕಂಪನಿಗಳಲ್ಲಿ ಒಂದಾಗಿದೆ.
SCROLL FOR NEXT