ರಾಜ್ಯ

ಮಳೆಗಾಲ ಬಂತು: ಉತ್ತರ ಕನ್ನಡ ಜಿಲ್ಲೆಯ ಮಣ್ಣಿನ ಗೋಡೆಯ ಶಾಲೆಗಳ ಶಿಕ್ಷಕರಿಗೆ ಶುರುವಾಯ್ತು ಆತಂಕ

Sumana Upadhyaya
ಕಾರವಾರ: ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸಿರುವ ರಾಜ್ಯ ಸರ್ಕಾರ ಶಾಲೆಗಳ ಕಟ್ಟಡದ ಗುಣಮಟ್ಟವನ್ನು ಮೊದಲು ಕಾಪಾಡಿಕೊಳ್ಳಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ಮಣ್ಣಿನ ಗೋಡೆಗಳಿದ್ದು ಮಳೆಗಾಲ ಬಂದರೆ ಇಲ್ಲಿನ ಶಿಕ್ಷಕರಿಗೆ ಆತಂಕ ಆರಂಭವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಆತಂಕವಾಗುತ್ತಿದೆ. ಶಿಕ್ಷಕರಿಗೆ ಸಹ ಶಾಲೆಯ ಕಟ್ಟಡದೊಳಗೆ ಮಕ್ಕಳನ್ನು ಕುಳ್ಳಿರಿಸಿ ಪಾಠ ಮಾಡಲು ಭಯವಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಭಾರೀ ಗಾಳಿ, ಮಳೆಯಾಗುತ್ತದೆ. ಪ್ರತಿ ಮುಂಗಾರು ಋತುವಿನಲ್ಲಿ ಮನೆಗಳ ಮೇಲೆ ಮರ ಬೀಳುವುದು, ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗುವುದು ಸಾಮಾನ್ಯ. ಹಲವು ಕಡೆಗಳಲ್ಲಿ ನದಿ, ಕೆರೆ ತುಂಬಿ ಹರಿದು ಮನೆ, ಕಟ್ಟಡಗಳು ಮುಳುಗಿಹೋಗುವ ಪರಿಸ್ಥಿತಿ ಕೂಡ ಇದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಜಿಲ್ಲೆಯ ಹಲವು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇನ್ನೂ ಮಣ್ಣಿನ ಗೋಡೆಗಳಿವೆ. ಮಣ್ಣಿನ ಗೋಡೆಗಳು ಹರಕು ಮುರುಕಾಗಿವೆ. ಕೆಲವು ಶಾಲೆಗಳು ಹಲವು ದಶಕಗಳ ಹಿಂದೆಯೇ ನಿರ್ಮಾಣವಾಗಿರುವಂತವು. 
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಮತ್ತು ಶಿರಸಿ ಎರಡು ಶೈಕ್ಷಣಿಕ ಜಿಲ್ಲೆಗಳಿವೆ. ಕಾರವಾರ ಜಿಲ್ಲೆಯಲ್ಲಿ 181 ಶಾಲೆಗಳು ಮತ್ತು ಶಿರಸಿಯಲ್ಲಿ 137 ಶಾಲೆಗಳು ಮಣ್ಣಿನ ಗೋಡೆಯಿಂದ ನಿರ್ಮಾಣಗೊಂಡವುಗಳಾಗಿವೆ. ಒಟ್ಟು ಈ ಜಿಲ್ಲೆಗಳಲ್ಲಿ 318 ಶಾಲೆಗಳಿದ್ದು ಇವುಗಳ ನಿರ್ಮಾಣ ಸುರಕ್ಷತೆ ಬಗ್ಗೆ ಸರ್ಕಾರ ಗಮನ ಹರಿಸಬೇಕಾದ ಅಗತ್ಯವಿದೆ.
ಈ ಜಿಲ್ಲೆಗಳಲ್ಲಿ 12,720 ವಿದ್ಯಾರ್ಥಿಗಳು ಮತ್ತು 424 ಶಿಕ್ಷಕರಿದ್ದಾರೆ. ಶಿಕ್ಷಕರಿಗೆ ಮತ್ತು ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರಿಗೆ ಆತಂಕ ಎದುರಾಗಿದೆ. ನಮ್ಮ ಶಾಲೆ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾದದ್ದು. 
ಹೊರಗಿನಿಂದ ನೋಡುವಾಗ ಏನೂ ಅನಿಸುವುದಿಲ್ಲ. ಒಂದು ಭಾರೀ ಮಳೆ ಬಂದು ಗೋಡೆ ಒದ್ದೆಯಾದಾಗ ನಮಗೆ ಭಯವಾಗುತ್ತದೆ. ಏನಾದರೂ ಹೆಚ್ಚುಕಮ್ಮಿಯಾದರೆ ಮಕ್ಕಳ ಪೋಷಕರು ಬೈಯುವುದು ಶಿಕ್ಷಕರನ್ನು. ಮಣ್ಣಿನ ಗೋಡೆಯ ಬಗ್ಗೆ ನಾವು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಹೇಳಿದ್ದೇವೆ, ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಶಿಕ್ಷಕರೊಬ್ಬರು. 
SCROLL FOR NEXT