ರಾಜ್ಯ

ಐಎಂಎ ಜ್ಯುವೆಲ್ಲರ್ಸ್ ನಲ್ಲಿ ಅಧಿಕ ಮೊತ್ತದ ಬೆಳ್ಳಿ ಪತ್ತೆ: ಅಧಿಕಾರಿಗಳಿಂದ ಮುಂದುವರೆದ ಪರಿಶೀಲನೆ

Nagaraja AB
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ಇಂದು  ಶಿವಾಜಿನಗರದ ಐಎಂಎ ಜ್ಯುವೆಲ್ಲರ್ಸ್‌ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿ, ಅಧಿಕ ಮೊತ್ತದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದೆ.
ಇದುವರೆಗೂ ಕೇವಲ ಒಂದು ಶೋಕೇಸ್ ಮಾತ್ರ ಪರಿಶೀಲನೆ ಮಾಡಲಾಗಿದ್ದು, ದಾಳಿಯ ಸಂದರ್ಭದಲ್ಲಿ ಚಿನ್ನಕ್ಕಿಂತ ಹೆಚ್ಚಾಗಿ ಬೆಳ್ಳಿ ಹಾಗೂ ಡೈಮಂಡ್ ಪೇಟೆಂಟ್ ಆಭರಣಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. 
ಎಸ್ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಆಭರಣಗಳನ್ನು ಸಾಗಿಸಲು ಒಟ್ಟು ನಾಲ್ಕು ಖಾಲಿ ಬಾಕ್ಸ್ ಗಳನ್ನು ಜ್ಯುವೆಲ್ಲರ್ಸ್ ಕಚೇರಿಗೆ ತರಿಸಿಕೊಂಡಿದೆ. ಎಸ್ ಐಟಿ ತಂಡದ ಜೊತೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.  ಒಟ್ಟು 5 ಮಹಡಿಯಲ್ಲಿ ಕಂಪನಿಗೆ ಸಂಬಂಧಿಸಿದ ವಿವಿಧ ವಿಭಾಗಗಳಲ್ಲಿ  ಅಧಿಕಾರಿಗಳು ಈಗಲೂ ಪರಿಶೀಲನೆ ಮುಂದುವರೆಸಿದ್ದಾರೆ.
ಈ ಮಧ್ಯೆ ಬಹುಕೋಟಿ ವಂಚನೆಯ ಐಎಂಎ ಪ್ರಕರಣವನ್ನು ಎಸ್ಐಟಿ ಬದಲು, ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಸಂಸತ್ ಭವನದಲ್ಲಿ ರಾಜ್ಯದ ಬಿಜೆಪಿ ಸಂಸದರು ವಿತ್ತ ಸಚಿವೆ ನಿರ್ಮಲಾ ಸಿತಾರಾಮ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದಾರೆ.
ಐಎಂಎ ಮಾಲೀಕ ಮನ್ಸೂರ್ ಖಾನ್ ಇತ್ತೀಚೆಗೆ ಕಂಪನಿಗೆ ಬೀಗ ಹಾಕಿ ವಿದೇಶಕ್ಕೆ ಪರಾರಿಯಾಗಿದ್ದು, ಹೂಡಿಕೆದಾರರಿಗೆ 1600 ಕೋಟಿ ಗೂ ಅಧಿಕ ಹಣ ವಂಚಿಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ಒಪ್ಪಿಸಿದೆ. ಇನ್ನೊಂದೆಡೆ ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
SCROLL FOR NEXT