ಬೆಂಗಳೂರು: ರಸ್ತೆ ವಿಸ್ತರಣೆಗೆ ಭೂಮಿ ನೀಡುವವರಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪ್ರಮಾಣಪತ್ರಗಳ ವಿತರಣೆ ವಿಳಂಬವಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಪಾಲಿಕೆಯ ಮಾಸಿಕ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಹಾಜರಿದ್ದ ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ, ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ, ಬೇಗೂರು ರಸ್ತೆ ವಿಸ್ತರಣೆ ಯೋಜನೆಗೆ ಭೂಮಿ ನೀಡಲು ಜನರ ಮನವೊಲಿಸಿದ್ದೇವೆ. ಆದರೆ, ಅವರಿಗೆ ಟಿಡಿಆರ್ ವಿತರಿಸಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಯೋಜನೆ ವಿಳಂಬವಾಗುತ್ತಿದ್ದು, ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ಮೊದಲಿದ್ದ 150 ಕೋಟಿ ರೂ. ಯೋಜನಾ ವೆಚ್ಚ ಈಗ 200 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಪಾಲಿಕೆಗೆ 50 ಕೋಟಿ ರೂ. ಹೊರೆಯಾಗಿದೆ ಎಂದು ಆರೋಪಿಸಿದರು.
ರಸ್ತೆ ವಿಸ್ತರಣೆಗೆ ಜಾಗ ನೀಡುವುದರ ಜೊತೆಗೆ, ಟಿಡಿಆರ್ ಪ್ರಮಾಣ ಪತ್ರ ಪಡೆಯಲು ಜನರು ಅಲೆದಾಡುವ ಪರಿಸ್ಥಿತಿ ಇದೆ. ಇದರಿಂದ ಜನರು ಯೋಜನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ, ಬೇಗೂರು ರಸ್ತೆ ವಿಸ್ತರಣೆ ಆಗದಿದ್ದರೆ ಜನ ಪಾಲಿಕೆಗೆ ಹಿಡಿಶಾಪ ಹಾಕಲಿದ್ದಾರೆ ಎಂದರು.
ಇದಕ್ಕೆ ಯಲಹಂಕ ಶಾಸಕ ವಿಶ್ವನಾಥ್, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಸದಸ್ಯರಾದ ಸತ್ಯನಾರಾಯಣ, ಮಂಜುನಾಥರೆಡ್ಡಿ, ಲಕ್ಷ್ಮಿನಾರಾಯಣ ಮತ್ತಿತರರು ಧ್ವನಿಗೂಡಿಸಿದರು.
ನಂತರ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಮುಖ್ಯ ಇಂಜಿನಿಯರ್ ಸೋಮಶೇಖರ್ ಅವರಿಗೆ ಟಿಡಿಆರ್ ವಿತರಣೆಗೆ ವಿಳಂಬವಾಗುತ್ತಿರುವ ಕುರಿತು ವಿವರಣೆ ಕೇಳಿದರು. ಆಗ ಅವರು, ಭೂ ಮಾಲೀಕರ ಮೂಲ ದಾಖಲೆಗಳನ್ನು ಸಂಗ್ರಹಿಸಲು ವಿಳಂಬವಾಗುತ್ತಿದೆ ಎಂದರು.
ಇದರಿಂದ ಅಸಮಾಧಾನಗೊಂಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ಮಂಜುನಾಥರೆಡ್ಡಿ , ಈ ರೀತಿಯ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದೀರಿ ಎಂದರೆ ನಿಮಗೆ ಇಚ್ಛಾಶಕ್ತಿ ಇಲ್ಲ ಎಂದೇ ಅರ್ಥ. ರಸ್ತೆ ವಿಸ್ತರಣೆಗೆ ಜಾಗದ ಲಭ್ಯತೆ ಇಲ್ಲದಿದ್ದರೆ ಯಾವ ಆಧಾರದಲ್ಲಿ ಕಾಮಗಾರಿ ಆರಂಭಿಸಿದ್ದೀರಿ, ಸಾರ್ವಜನಿಕರ ಹಣವನ್ನೇಕೆ ಪೊಲು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕೊನೆಯಲ್ಲಿ ಮೇಯರ್ ಗಂಗಾಂಬಿಕೆ, ಟಿಡಿಆರ್ ಪ್ರಮಾಣ ಪತ್ರ ವಿತರಣೆಗೆ ಖುದ್ದು ಮುತುವರ್ಜಿ ವಹಿಸಿ, ಭೂಸ್ವಾಧೀನ ಕಚೇರಿಯನ್ನು ಸರ್ಜಾಪುರ ರಸ್ತೆಗೆ ಸ್ಥಳಾಂತರ ಮಾಡಲಾಗುವುದು.ಈಗಾಗಲೇ ಒಪ್ಪಿಗೆ ಪತ್ರ ನೀಡಿರುವ ಭೂಮಾಲೀಕರಿಗೆ ತಕ್ಷಣವೇ ಟಿಡಿಆರ್ ವಿತರಿಸಲಾಗುವುದು. ಬಾಕಿ ಜಾಗಕ್ಕೆ ಮಾಲೀಕರನ್ನು ಒಪ್ಪಿಸಲು ಜನಪ್ರತಿನಿಧಿಗಳ ಜತೆ ಸೇರಿ ಸಭೆ ನಡೆಸಿ ಮನೆ ಬಾಗಿಲಲ್ಲೇ ಟಿಡಿಆರ್ ವಿತರಿಸುವ ಭರವಸೆ ನೀಡಲಾಗುವುದು. ಈ ಸಂಬಂಧ ಸದ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.