ರಾಜ್ಯ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ವಿಮಾನ ಅವಘಡ!

Srinivasamurthy VN
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ವಿಮಾನವೊಂದು ರನ್ ವೇಯಲ್ಲಿ ಜಾರಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಸಂಜೆ ಬರುತ್ತಿದ್ದ IX384 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ನಿಲ್ದಾಣದ ರನ್ ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿ ಟ್ಯಾಕ್ಸಿ ವೇಯಲ್ಲಿ ಜಾರಿ ನಿಂತಿದ್ದು, ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ. ವಿಮಾನದ ಪೈಲಟ್ ನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಟರ್ಮಿನಲ್ ಸಿಗ್ನಲ್ ನಿಂದ ಸೂಚನೆ ಬಂದ ತಕ್ಷಣ ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಿಸಲು ಯತ್ನಿಸಿದ್ದಾರೆ.  ಈ ವೇಳೆ ವಿಮಾನ ರನ್‌ ವೇ ಮೇಲೆ ಇಳಿಯುತ್ತಿದ್ದಂತೆಯೇ ರನ್ ವೇ ಯಿಂದಜಾರಿ ಬದಿಗೆ ಸರಿದು ಟ್ಯಾಕ್ಸಿ ವೇ ಮೇಲೆ ನಿಂತಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಿಮಾನದಲ್ಲಿ ಸಿಬ್ಬಂದಿಗಳೂ ಸೇರಿದಂತೆ ಒಟ್ಟು 183 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ವಿಮಾನ ಜಾರಿದ ಹಿನ್ನಲೆಯಲ್ಲಿ ಸಿಬ್ಬಂದಿಗಳು ಪ್ರಯಾಣಿಕರನ್ನು ರನ್ ವೇಯಲ್ಲೇ ಇಳಿಸಿದ್ದಾರೆ.
ಈ ಹಿಂದೆ 2010ರ ಮೇ 22 ರಂದು ಮುಂಜಾನೆ ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿ 158 ಮಂದಿ ಮೃತಪಟ್ಟಿದ್ದರು. 
SCROLL FOR NEXT