ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಉಡುಪಿ: ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಲ್ಲಿ ತೋರಿದ ಧೈರ್ಯ, ಸ್ಥೈರ್ಯಗಳು ದೇಶದ ಗೌರವ ಹೆಚ್ಚಿಸುವಂತಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ. ಗುರುವಾರವಷ್ಟೇ ಮಠದ ಕಿರಿಯ ಶ್ರೀಗಳೊಡನೆ "ಉರಿ ದಿ ಸರ್ಜಿಕಲ್ ಸ್ಟ್ರೈಕ್" ಚಿತ್ರ ವೀಕ್ಷಿಸಿದ್ದ ಶ್ರೀಗಳು ಶುಕ್ರವಾರ ಸುದ್ದಿಗಾರರೊಡನೆ ಮಾತನಾಡಿದ್ದಾರೆ.
"ಅಭಿನಂದನ್ ಅವರ ಆತ್ಮಸ್ಥೈರ್ಯ ಮೆಚ್ಚುವಂತಹದು, ಅವರಿಗೆ ಸಾವಿರ ಸಾವಿರ ಅಭಿನಂದನೆಗಳು" ಪೇಜಾವರಶ್ರೀಗಳು ಹೇಳಿದ್ದಾರೆ.
"ಅಭಿನಂದನ್ ತಮ್ಮ ಜೇಬಿನಲ್ಲಿದ್ದ ಕಾಗದ ಪತ್ರಗಳನ್ನು ನುಂಗಿ ದೇಶದ ಕಾಳಜಿ ತೋರಿದ್ದಾರೆ.
"ಯುದ್ಧ ಒಳ್ಳೆಯದಲ್ಲ, ಯುದ್ಧದಿಂದ ಸಾವಿರಾರು ಜನ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಶಾಂತಿ ಕಾಪಾಡಿಕೊಳ್ಳುವ ಕಾರ್ಯ ಆಗಬೇಕು. ಮೋದಿ ಸರಿಯಾದ ಸಮಯದಲ್ಲಿ ಪ್ರಧಾನಿಗಳಾಗಿದ್ದಾರೆ. ಅವರ ನಿರ್ಧಾರಕ್ಕೆ ನನ್ನ ಬೆಂಬಲವಿದೆ.
"ದೇಶದಲ್ಲಿನ ಬುದ್ದಿಜೀವಿಗಳ ಬಗ್ಗೆ ತಿರಸ್ಕಾರವಿದೆ. ಈ ಸಮಯದಲ್ಲಿಯೂ ಅವರು ದೇಶಾಭಿಮಾನ ತೋರಿಲ್ಲದ್ದಕ್ಕೆ ಖೇದವಿದೆ. ಬುದ್ದಿಜೀವಿಗಳಿಗೆ ಒಳ್ಳೆ ಬುದ್ದಿ ಬರಲಿ, ಅವರು ದುರ್ಬುದ್ದಿಜೀವಿಗಳಾಗಬಾರದು. ಅವರಿಗೆ ಒಳ್ಳೆಯ ಬುದ್ದಿ ಬರಲೆಂದು ಣಾನು ದೇವರಲ್ಲಿ ಪ್ರಾರ್ಥಿಸುವೆ" ಶ್ರೀಗಳು ಹೇಳಿದರು.
ಯಡಿಯೂರಪ್ಪ ಹೇಳಿಕೆ ಬಹಳ ಚಿಕ್ಕದು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ 22 ಸೀಟು ಗೆಲ್ಲುವ ಹೇಳಿಕೆ ಬಹಳ ಚಿಕ್ಕದು. ಇದಕ್ಕೆ ಅಷ್ಟೊಂದು ಮಹತ್ವ ನೀಡಬೇಕಾಗಿಲ್ಲ್ಲ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. "ಇದು ದೊಡ್ಡ ವಿಚಾರವಲ್ಲ. ಇಂದಿರಾಗಾಂಧಿ ಆಳ್ವಿಕೆಯಲ್ಲಿ ಯುದ್ಧವಾದಾಗಲೂ ಕಾಂಗ್ರೆಸ್ ಗೆ ಪ್ರಯೋಜನವಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು.ಯಡಿಯೂರಪ್ಪ ಅವರ ಹೇಳಿಕೆಯನ್ನು ದೊಡ್ಡ ವಿಷಯ ಮಾಡುವುದು ಬೇಡ, ಪಾಕಿಸ್ತಾನದಲ್ಲಿನ ಉಗ್ರರ ಸಂಹಾರವಾಗಬೇಕು.ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗೆ ಅಭಿನಂದನೆ" ಶ್ರೀಗಳು ಹೇಳಿದ್ದಾರೆ.