ಬೆಂಗಳೂರು: ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ತಮ್ಮ ಸಹೋದರನ ಭೂಮಿ ಇಟ್ಟುಕೊಂಡು ಅಕ್ರಮ ಎಸಗಿದ ಮಾಜಿ ಶಾಸಕ ಹಾಗೂ ಬಿಡಿಎ ಮಾಜಿ ಸದಸ್ಯರಾಗಿದ್ದ ಎಂ.ಶ್ರೀನಿವಾಸ್‌ಗೆ ಹೈಕೋರ್ಟ್ 11ಲಕ್ಷ ದಂಡ ವಿಧಿಸಿದೆ.
ಪೂರ್ಣ ಪ್ರಜ್ಞ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಮಹತ್ವದ ಆದೇಶ ನೀಡಿದೆ.
ಪೂರ್ಣ ಪ್ರಜ್ಞ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿಗೆ 2 ಲಕ್ಷ ರೂ., 16 ಅರ್ಜಿದಾರರಿಗೆ ತಲಾ 50 ಸಾವಿರ ರೂ. ಮತ್ತು ಬಿಡಿಎಗೆ 1 ಲಕ್ಷ ರೂ. ದಂಡವನ್ನು ಎಂ.ಶ್ರೀನಿವಾಸ್ ಎಂಟು ವಾರಗಳಲ್ಲಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ, ಪೂರ್ಣಪ್ರಜ್ಞ ಬಡಾವಣೆಗೆ ಸಂಬಂಧಿಸಿದಂತೆ ಭೂ ಸ್ವಾಧೀನವನ್ನು ರದ್ದುಗೊಳಿಸಿ, ಎಂ.ಶ್ರೀನಿವಾಸ್ ಅವರ ಪರ 2016ರ ಜು.15ರಂದು ಸಹ ಪೀಠ(ಕೋ ಆರ್ಡಿನೇಟ್ ಬೆಂಚ್) ನೀಡಿದ್ದ ತೀರ್ಪನ್ನು ನ್ಯಾಯಪೀಠ ಪುನರ್ ಪರಿಶೀಲಿಸಿದೆ. ಹಾಗಾಗಿ ಪೂರ್ಣಪ್ರಜ್ಞ ಬಡಾವಣೆಗೆ ಮಾಡಿದ್ದ ಭೂ ಸ್ವಾಧೀನ ಊರ್ಜಿತವಾಗಲಿದೆ.
ಕಾನೂನು, ಕೋರ್ಟ್ ದುರುಪಯೋಗ: ''ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಬಿಡಿಎ ಸದಸ್ಯರೂ ಆಗಿದ್ದರು.ಅವರು ಅರ್ಜಿದಾರರಾದ ಸೊಸೈಟಿ, ನಿವೇಶನ ಹಂಚಿಕೆದಾರರು ಮತ್ತು ಬಿಡಿಎ ಹಾಗೂ ನ್ಯಾಯಾಲಯವನ್ನೂ ಸಹ ವಂಚಿಸಿ ಪಡೆದಿದ್ದ ತೀರ್ಪನ್ನು ವಾಪಸ್ ಪಡೆಯಲಾಗಿದೆ.
ಯೋಜನೆಯ ಅವಧಿ ಮುಗಿದಿದೆ ಎಂದು ನ್ಯಾಯಾಲಯಕ್ಕೆ ಸುಳ್ಳು ಹೇಳಲಾಗಿದೆ. ತನ್ನ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಾಗ ಅವರು ಪ್ರಭಾವ ಬೀರಿದ್ದಾರೆ. ಶ್ರೀನಿವಾಸ್ ಕಾನೂನು ಹಾಗೂ ಕೋರ್ಟ್ ಅನ್ನು ದುರುಪಯೋಗ ಮಾಡಿಕೊಂಡು ನ್ಯಾಯಾಂಗವನ್ನೇ ವಂಚಿಸಿದ್ದಾರೆ. ಇದನ್ನು ಸಹಿಸಲಾಗದು ''ಎಂದು ನ್ಯಾಯಪೀಠ ಹೇಳಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿಯಲ್ಲಿ ಶ್ರೀನಿವಾಸ್‌ಗೆ ಸೇರಿದ 37 ಗುಂಟೆ ಮತ್ತು ಶ್ರೀನಿವಾಸ್ ಅವರ ಸಹೋದರ ಕೃಷ್ಣಪ್ಪ ಅವರ ಹೆಸರಿನಲ್ಲಿದ್ದ 4 ಎಕರೆ 9 ಗುಂಟೆಗೆ ಸಂಬಂಧಿಸಿದಂತೆ 2015ರ ಡಿ.16ರಂದು ನಡೆದ ಒಪ್ಪಂದ ಮತ್ತು ಜಿಪಿಎ ರದ್ದುಪಡಿಸುವ ಲೀಗಲ್ ನೋಟಿಸ್ ಹೊರಡಿಸಿದ್ದಾರೆ.
ನಂತರ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿ ಬಿಡಿಎ ಕಾಯಿದೆ ಸೆಕ್ಷನ್ 27ರ ಅಡಿ ಯೋಜನೆ ಅವಧಿ ಮುಗಿದಿರುವುದರಿಂದ ಭೂ ಸ್ವಾಧೀನ ಮಾಡಿಕೊಳ್ಳುವಂತಿಲ್ಲವೆಂದು ಕೋರಿದ್ದಾರೆ. ಅವರು ಅರ್ಜಿಯಲ್ಲಿ ಅರ್ಜಿದಾರರ ಸೊಸೈಟಿ ಅಥವಾ ನಿವೇಶನ ಹಂಚಿಕೆಯಾಗಿದ್ದ ಯಾರನ್ನೂ ಪ್ರತಿವಾದಿಯನ್ನಾಗಿ ಮಾಡದೆ ಏಕಪಕ್ಷೀಯ ತೀರ್ಪು ಪಡೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos