ಗದಗ: ಈಗಿನ ಜೀವನಶೈಲಿಯಲ್ಲಿ 40-50 ವರ್ಷ ಕಳೆದರೆ ಸಾಕು, ಆ ಖಾಯಿಲೆ, ಈ ಖಾಯಿಲೆ ಎಂದು ಹೇಳಿಕೊಂಡು ಏನೂ ಕೆಲಸ ಮಾಡಲು ಸಾಧ್ಯವಾಗದೆ ಮನೆಯಲ್ಲಿರುವವರನ್ನು ನೋಡುತ್ತೇವೆ. ಈಗಿನ ಕಾಲದವರಿಗೆ ಹೋಲಿಸಿದರೆ ಅಜ್ಜಿಯಂದಿರೇ ವಾಸಿ ಎಂದು ಹೇಳುತ್ತೇವೆ. ಅದನ್ನು ಗದಗದ 94 ವರ್ಷದ ಅಜ್ಜಿ ತುಂಗಬಾಯಿ ಪಂತರ್ ಸಾಬೀತುಪಡಿಸಿದ್ದಾರೆ. ಇವರ ಕೆಲಸ, ಜೀವನ ಕಂಡರೆ ಇಳಿ ವಯಸ್ಸಿನ ಹೆಣ್ಣು ಮಕ್ಕಳು ನಾಚಿ ನೀರಾಗಬೇಕು. ಇವರು ಇಂದಿನ ಕಾಲದ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.
ಗದಗದ 94 ವರ್ಷದ ಅಜ್ಜಿ ತುಂಗಬಾಯಿ ಪಂತರ್ ಪ್ರತಿದಿನ ಬೆಳಗ್ಗೆ 5.30ಕ್ಕೆ ಏಳುತ್ತಾರೆ. ಎದ್ದು ತಮ್ಮ ಹಿತ್ತಲಿನಲ್ಲಿ ವಾಕಿಂಗ್ ಹೋಗುತ್ತಾರೆ. ತಮಗೆ ಬೆಳಗಿನ ಉಪಹಾರವನ್ನು ತಾವೇ ಮಾಡಿಕೊಳ್ಳುತ್ತಾರೆ, ನಂತರ ಮನೆಯನ್ನು ಸ್ವಚ್ಛಗೊಳಿಸಿ ಉಳಿದ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಬೆಳಗ್ಗೆ 8.45ರ ವೇಳೆಗೆ ಶಾಲೆಗೆ ಹೋಗಲು ಬಸ್ ಸ್ಟಾಂಡ್ ಗೆ ಹೋಗುತ್ತಾರೆ, ಅಷ್ಟಕ್ಕೂ ಅವರು ಶಾಲೆಗೆ ಹೋಗುವುದು ಶಾಲೆಯಲ್ಲಿ ಅಡುಗೆ ಉಸ್ತುವಾರಿ ನೋಡಿಕೊಳ್ಳಲು.
ಈ ಇಳಿ ವಯಸ್ಸಿನಲ್ಲಿ ಯಾವುದೇ ಖಾಯಿಲೆ, ಔಷಧಿಗಳು ತುಂಗಾಬಾಯಿಯವರ ಹತ್ತಿರ ಸುಳಿದಿಲ್ಲ. ಚಿಕ್ಕಟ್ಟಿಯ ಶಾಲೆಯಲ್ಲಿ ಕೆಲಸ ಮಾಡುವ ಇವರು ಪ್ರತಿದಿನ 5 ಕಿಲೋ ಮೀಟರ್ ಪ್ರಯಾಣಿಸುತ್ತಾರೆ. ಸುತ್ತಮುತ್ತಲ ನಿವಾಸಿಗಳು, ಶಾಲೆಯಲ್ಲಿ ತುಂಗಾಬಾಯಿಯನ್ನು ಜನರು ಪ್ರೀತಿಯಿಂದ 'ಮರ್ಕ್ಯುರಿ ಅಜ್ಜಿ' ಎಂದೇ ಕರೆಯುತ್ತಾರೆ.
ಶಾಲೆಯ ಅಡುಗೆ ಮನೆಯಲ್ಲಿ ತರಕಾರಿ ಹಚ್ಚಿ ಕೊಡುವುದು, ರೋಟಿ ಮಾಡಲು ಸಹಾಯ ಮಾಡುವುದು, ಗಿಡಗಳಿಗೆ ನೀರು ಹಾಕುವ ಕೆಲಸ ಮಾಡುತ್ತಾರೆ. ವಿರಾಮದ ವೇಳೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಬೆಳಗ್ಗೆ 9 ಗಂಟೆಗೆ ಶಾಲೆಗೆ ಹೋದರೆ ಮನೆಗೆ ಹಿಂತಿರುಗಿ ಬರುವುದು ಸಂಜೆ 4.30ಕ್ಕೆ, ಹೀಗೆ ಕಳೆದ 18 ವರ್ಷಗಳಿಂದ ಕಾಯಕದಲ್ಲಿ ತೊಡಗಿದ್ದಾರೆ ಈ ಅಜ್ಜಿ.
ತುಂಗಾಬಾಯಿಯವರು ನಿವೃತ್ತ ಶಿಕ್ಷಕಿ, 1980ರಲ್ಲಿ ಶಿರಹಟ್ಟಿಯಲ್ಲಿ ದಬಲಿ ಶಾಲೆಯಲ್ಲಿ 55 ವರ್ಷದವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ನಂತರ ಸಣ್ಣ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು, ಅದು ಬಿಟ್ಟು ತಮ್ಮ ಮೂಲ ವೃತ್ತಿಯನ್ನು 2000ನೇ ಇಸವಿಯಲ್ಲಿ ಆಯ್ದುಕೊಂಡು ಚಿಕ್ಕಟ್ಟಿ ಶಾಲೆಗೆ ಮತ್ತೆ ಸೇರಿದರು.
ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಇಷ್ಟವಾಗುವುದಿಲ್ಲ. ಖುಷಿಯಿಂದ ಶಾಲೆಗೆ ಬಂದು ಕೆಲಸ ಮಾಡುತ್ತೇನೆ, 65-70 ವರ್ಷಗಳು ಕಳೆದ ಮೇಲೆ ಕೆಲಸ ಹುಡುಕುತ್ತಿದ್ದಾಗ ಹಲವರು ನನಗೆ ವಯಸ್ಸಾಗಿದೆ ಎಂದು ಕೆಲಸ ನೀಡಲು ನಿರಾಕರಿಸಿದರು. ಚಿಕ್ಕಟ್ಟಿ ಶಾಲೆಯ ಸ್ಥಾಪಕ ಎಸ್ ವೈ ಚಿಕ್ಕಟ್ಟಿ ನನ್ನ ಉತ್ಸಾಹ ಕಂಡು ಕೆಲಸ ನೀಡಿದರು, ನಾನು ನಿವೃತ್ತ ಶಿಕ್ಷಕಿಯಾದರೂ ನನ್ನ ದೇಹಕ್ಕೆ ಸುಸ್ತಾಗಿಲ್ಲ ಎಂದು ತುಂಗಾಬಾಯಿ ಹೇಳುತ್ತಾರೆ.
ತುಂಗಾಬಾಯಿ ಜನಿಸಿದ್ದು 1925ರಲ್ಲಿ, ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಗಳಿಸಿದ್ದಾರೆ. ಹಿಂದಿ ರಾಷ್ಟ್ರಭಾಷಾ ಪ್ರಮಾಣಪತ್ರದ ಆಧಾರದ ಮೇಲೆ 1948ರಲ್ಲಿ ಅವರಿಗೆ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಸಿಕ್ಕಿತ್ತು. 3ನೇ ತರಗತಿಯಿಂದ 6ನೇ ತರಗತಿಯವರೆಗೆ ಎಲ್ಲಾ ವಿಷಯಗಳಲ್ಲಿ ಮಕ್ಕಳಿಗೆ ಬೋಧಿಸುತ್ತಿದ್ದರಂತೆ.
ತುಂಗಾಬಾಯಿಯವರು ಮದುವೆಯಾದ ಮೂರೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡರು. ನಂತರ ಶಿರಹಟ್ಟಿಯಲ್ಲಿ ಒಬ್ಬರೇ ಬದುಕು ಸಾಗಿಸುತ್ತಿದ್ದರು. ನಿವೃತ್ತಿ ನಂತರ ತಮ್ಮ ಸೋದರಿ ಜೊತೆ ಗದಗದಲ್ಲಿ ವಾಸಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಮನೆಯಿಂದ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗಿ ಬಸ್ ಹತ್ತುತ್ತಾರೆ. ಅವರ ನಿತ್ಯದ ಆಹಾರದಲ್ಲಿ ಒಂದು ರೊಟ್ಟಿ, ತರಕಾರಿ, ಧಾನ್ಯ ಮತ್ತು ಬೀಜಗಳಿರುತ್ತವೆ.ಯಾವುದೇ ಊರುಗೋಲು ಸಹಾಯವಿಲ್ಲದೆ ನಡೆಯುತ್ತಾರೆ.
ಕಥೆ, ಕಾದಂಬರಿ, ಪತ್ರಿಕೆಗಳನ್ನು ಓದುವ ಅಭ್ಯಾಸ ಈಗಲೂ ತುಂಗಾಬಾಯಿಯವರಿಗೆ ಇದೆ. ಶಾಲೆ ಮತ್ತು ಮನೆಯಲ್ಲಿ ಒಂದು ನಿಮಿಷ ಕೂಡ ಸುಮ್ಮನೆ ಕೂರದೆ ಯಾವಾಗಲೂ ಚಲನಶೀಲವಾಗಿರುವುದೇ ತುಂಗಾಬಾಯಿಯವರ ಆರೋಗ್ಯ ಮತ್ತು ಸಂತೋಷದ ಗುಟ್ಟು ಎನ್ನಬಹುದು.
ಇನ್ನು ತುಂಗಾಬಾಯಿಯವರಿಗೆ ಮಕ್ಕಳಿಗೆ ಇಂಗ್ಲಿಷ್ ವ್ಯಾಕರಣ ಕಲಿಸಿಕೊಡಲು ಕಷ್ಟವಾಗುತ್ತದೆ ಎಂದು ಶಾಸ್ತ್ರೀಯ ಸಂಗೀತದ ದಂತಕತೆ ಭೀಮ್ ಸೇನ್ ಜೋಷಿಯವರ ತಂದೆ ಗುರುರಾಜ ಜೋಷಿಯವರ ಬಳಿ ಇಂಗ್ಲಿಷ್ ವ್ಯಾಕರಣ ಮತ್ತು ಭಾಷೆ ಕಲಿತದ್ದನ್ನು ನೆನಪಿಸಿಕೊಳ್ಳುತ್ತಾರೆ. ಪಂಡಿತ್ ಭೀಮ್ ಸೇನ್ ಜೋಷಿಯವರ ಬಳಿ ಕಳೆದ ಸಮಯವನ್ನು ಕೂಡ ಸ್ಮರಿಸಿಕೊಳ್ಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos