ರಾಜ್ಯ

ಯಡಿಯೂರಪ್ಪ ಆಪ್ತ ಸಹಾಯಕನ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

Nagaraja AB

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್  ಎಂಬುವರ ಅಪಹರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್. ಸಂತೋಷ್ ವಿರುದ್ಧದ ಸಿಸಿಬಿ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಂತೋಷ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನು ಸಿಸಿಬಿ ತನಿಖೆಗೆ ಒಪ್ಪಿಸಿ ಪೊಲೀಸ್ ಉಪ ಆಯುಕ್ತರು ಹೊರಡಿಸಿದ್ದ ಅದೇಶಕ್ಕೆ ತಡೆಯಾಜ್ಞೆ ನೀಡಿದೆ.

ಅರ್ಜಿದಾರರ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇ ಔಟ್ ಠಾಣೆ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ನಂತರ,  2019ರ ಜನವರಿ 24ರಂದು ನಗರ ಪೊಲೀಸ್ ಉಪ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ಆದೇಶ ಹೊರಡಿಸಿರುವುದು ಕಾನೂನುಬಾಹಿರ. ಅರ್ಜಿದಾರರು ತನಿಖೆಗೆ ಹಾಜರಾಗುವಂತೆ ಫೆ.5ರಂದು ಸಿಸಿಬಿ ನೋಟಿಸ್ ನೀಡಿದೆ. ಇದಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.

ಕೆಲ ಅಪರಿಚಿತ ವ್ಯಕ್ತಿಗಳು ತಮ್ಮ ಅಪಹರಣಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ 2017ರ ಮೇ 11ರಂದು ಮಹಾಲಕ್ಷ್ಮೀ ಲೇ ಔಟ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು, ಬಿ.ಎಸ್‍.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್‍ ಸೇರಿ ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದರು. 2018ರ ಡಿಸೆಂಬರ್ 17ರಂದು ವಿಚಾರಣಾ  ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ದಾಖಲಿಸಿದ್ದರು.
SCROLL FOR NEXT