ರಾಜ್ಯ

ವಿಜಯಪುರ: ಎಬಿವಿಪಿ ಕಾರ್ಯಕರ್ತರ ವಿರುದ್ಧ ಸಹಾಯಕ ಪ್ರಾಧ್ಯಾಪಕ ಪೊಲೀಸರಿಗೆ ದೂರು

Sumana Upadhyaya
ವಿಜಯಪುರ: ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿಗೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದ ಹೇಳಿಕೆಗೆ ಮಂಡಿಯೂರಿ ಕುಳಿತುಕೊಳ್ಳುವಂತೆ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದ್ದಕ್ಕೆ ಡಾ ಪಿಜಿ ಹಳ್ಕಟ್ಟಿ ಎಂಜಿನಿಯರಿಂಗ್ ಕಾಲೇಜು ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ವಾತರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಅನಾಮಧೇಯ ವ್ಯಕ್ತಿಗಳಿಂದ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ವಾತರ್ ದೂರಿನಲ್ಲಿ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ಈ ಘಟನೆಯಿಂದಾಗಿ ತಮ್ಮ ಕುಟುಂಬದವರಿಗೆ ಮಾನಸಿಕವಾಗಿ ಆಘಾತವಾಗಿದ್ದು ತಮ್ಮ ತಾಯಿ ಅನಾರೋಗ್ಯಕ್ಕೀಡಾಗಿದ್ದಾರೆ. ಎಬಿವಿಪಿ ಕಾರ್ಯಕರ್ತರಿಗೆ ಒಂದು ಪಾಠ ಕಲಿಸಬೇಕೆಂದು ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ನಾನು ಯಾವುದೇ ದೇಶ ವಿರೋಧಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿಲ್ಲ. ಎರಡೂ ದೇಶಗಳ ಮಧ್ಯೆ ಶಾಂತಿ ಸ್ಥಾಪನೆಯನ್ನು ಬಯಸಿ ನಾನು ಪೋಸ್ಟ್ ಹಾಕಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ನಾನು ಈ ಹೇಳಿಕೆ ಪ್ರಕಟಿಸಿದ ದಿನದಿಂದ ಕೆಲ ಎಬಿವಿಪಿ ಕಾರ್ಯಕರ್ತರು ಕಾಲೇಜಿನ ಹೊರಗೆ ಗಲಾಟೆ ಎಬ್ಬಿಸುತ್ತಿದ್ದಾರೆ ಎಂದರು.
ಎರಡು ದಿನಗಳ ರಜೆ ಬಳಿಕ ವಾತರ್ ನಿನ್ನೆ ಮತ್ತೆ ಕಾಲೇಜಿಗೆ ಕೆಲಸಕ್ಕೆ ಮರಳಿದ್ದಾರೆ. ಈ ಮಧ್ಯೆ ಕಾಲೇಜು ಆಡಳಿತ ಮಂಡಳಿ ಘಟನೆ ಬಗ್ಗೆ ತನಿಖೆ ನಡೆಸಲು 5 ಸದಸ್ಯರ ಸಮಿತಿಯನ್ನು ರಚಿಸಿದೆ.
SCROLL FOR NEXT