ಅಳಂದ ಶಾಸಕ ಸುಭಾಷ್ ಗುತ್ತೇದಾರ್
ಕಲಬುರಗಿ: ಪಾಲಿಕೆ ಅಧಿಕಾರಿಯೊಬ್ಬರನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಅಳಂದ ಕ್ಷೇತ್ರದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಅಳಂದ ಪುರಸಭೆಯ ಮುಖ್ಯ ಅಧಿಕಾರಿ ಚಂದ್ರಕಾಂತ್ ಪಾಟೀಲ್ ನೀಡಿರುವ ದೂರಿನ ಮೇಲೆ ಅಳಂದ ಪೊಲೀಸ್ ಠಾಣೆಯಲ್ಲಿ ಸುಭಾಷ್ ಗುತ್ತೇದಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಂದ್ರಕಾಂತ್ ಪಾಟೀಲ್ ಅವರನ್ನು ದೂರವಾಣಿಯಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಆರೋಪ ಕೇಳಿಬಂದಿದೆ.
ಚಂದ್ರಕಾಂತ್ ಪಾಟೀಲ್ ನೀಡಿರುವ ದೂರಿನಲ್ಲಿ, ಕಳೆದ ಮಾರ್ಚ್ 4ರಂದು ಶಾಸಕರು ದೂರವಾಣಿಯಲ್ಲಿ ಮಾತನಾಡುವಾಗ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಟೆಂಡರ್ ನೀಡಿ ಕಾಮಗಾರಿ ಪೂರ್ಣಗೊಳಿಸದ ಕಾರಣ ನಿಂದಿಸಿದ್ದಾರೆ. ಒಂದು ಕೋಟಿ ರೂಪಾಯಿಗಳ ಟೆಂಡರ್ ನ ಗುತ್ತಿಗೆಯನ್ನು ರದ್ದುಪಡಿಸುವಂತೆ ಶಾಸಕರು ಹೇಳಿದ್ದಾರೆ. ಆದರೆ ಟೆಂಡರ್ ರದ್ದುಪಡಿಸುವ ಅಧಿಕಾರ ತಮಗಿಲ್ಲ ಎಂದಾಗ ಶಾಸಕ ಗುತ್ತೇದಾರ್ ತಮ್ಮನ್ನು ಕೊಳಕು ಶಬ್ದಗಳಲ್ಲಿ ನಿಂದಿಸಿದ್ದಾರೆ ಎಂದಿದ್ದಾರೆ.