ರಾಜ್ಯ

ಅತೃಪ್ತ ಶಾಸಕರ ಅನರ್ಹತೆ ಪ್ರಕರಣ: ವಿಚಾರಣೆ ಮುಂದೂಡಿದ ಸ್ಪೀಕರ್

Srinivas Rao BV
ಬೆಂಗಳೂರು: ಪಕ್ಷಾಂತರ ನಿಷೇಧ ಕಾಯಿದೆ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‍ನ ನಾಲ್ವರು ಶಾಸಕರ ಪ್ರಕರಣದ ವಿಚಾರಣೆಯನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಮುಂದೂಡಿದ್ದಾರೆ.
ಪಕ್ಷದಿಂದ ಬಂಡಾಯ ಎದ್ದಿದ್ದ ಶಾಸಕರಾದ ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಮಹೇಶ್ ಕುಮಟಹಳ್ಳಿ ಅವರಿಗೆ ವಿಪ್ ಜಾರಿಯಾಗಿದ್ದರೂ  ಕಾಂಗ್ರೆಸ್ ಶಾಸಕಾಂಗ ಸಭೆಗೆ  ಸತತ ಗೈರು ಹಾಜರಾಗಿದ್ದು, ಇವರ ವಿರುದ್ಧ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ಗೆ ದೂರು ನೀಡಿ, ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಕ್ರಮ ಜರುಗಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು.
ಮಂಗಳವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸಭಾಧ್ಯಕ್ಷ ರಮೇಶ್ ಕುಮಾರ್ ನಿರ್ಧರಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಇದೀಗ ವಿಚಾರಣೆಯನ್ನೇ ಮುಂದೂಡಲಾಗಿದ್ದು, ಬದಲಿ ದಿನಾಂಕವನ್ನು ತಿಳಿಸುವುದಾಗಿ ವಿಧಾನಸಭೆ ಅಧ್ಯಕ್ಷರ ಕಾರ್ಯಾಲಯ ನೀಡಿರುವ ಸೂಚನೆಯಲ್ಲಿ ತಿಳಿಸಲಾಗಿದೆ.
ಅತೃಪ್ತ ಶಾಸಕರ ಪೈಕಿ  ಡಾ.ಉಮೇಶ್ ಜಾಧವ್ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಸ್ಪೀಕರ್ ಇನ್ನೂ ಸಹ ರಾಜೀನಾಮೆ ಅಂಗೀಕರಿಸಿಲ್ಲ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದಿರುವ ಜಾಧವ್, ಬಿಜೆಪಿಯಿಂದ ಕಲಬುರ್ಗಿ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಸದ್ಯಕ್ಕೆ ವಿಚಾರಣೆ ನಡೆಸುವುದು ಬೇಡ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸ್ಪೀಕರ್ ಅವರಿಗೆ ಮನವಿ ಮಾಡಿದ ಮೇರೆಗೆ ವಿಚಾರಣೆ ನಡೆಸಲಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಅತೃಪ್ತ ಶಾಸಕರ ವಿಚಾರಣೆ ನಡೆಸುವುದು ಅನುಮಾನ ಎನ್ನಲಾಗಿದೆ.
SCROLL FOR NEXT