ರಾಜ್ಯ

ಮಾತೆ ಮಹಾದೇವಿ ಆರೋಗ್ಯ ಸ್ಥಿತಿ ಗಂಭೀರ, ಐಸಿಯುನಲ್ಲಿ ಚಿಕಿತ್ಸೆ

Lingaraj Badiger
ಬೆಂಗಳೂರು: ಕೂಡಲಸಂಗಮದ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕಳೆದ ಏಳು ದಿನಗಳಿಂದ ನಗರದ ಮಣಿಪಾಲ್​ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ತಜ್ಞವೈದ್ಯರ ತಂಡ ಚಿಕಿತ್ಸೆ ಮುಂದುವರೆಸಿದೆ.
ಮೂಲಗಳ ಪ್ರಕಾರ, ಸುಮಾರು ಒಂದು ವರ್ಷದಿಂದ ಮೂತ್ರಪಿಂಡ ವಿಫಲವಾಗಿದ್ದು, ಡಯಾಲಿಸಿಸ್​ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಹಿಂದೆಂಗಿಂತಲೂ ಅವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ.
ಹೆಚ್ಚಿನ ಚಿಕಿತ್ಸೆ ಕುರಿತಂತೆ ತೀರ್ಮಾನ ಕೈಗೊಳ್ಳಲು ರಾಜಾಜಿನಗರದಲ್ಲಿರುವ ಬಸವ ಮಂಟಪದಲ್ಲಿ ಸಭೆ ಸೇರಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಗೃಹ ಸಚಿವ ಎಂ.ಬಿ. ಪಾಟೀಲ್​ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಶೀಘ್ರದಲ್ಲೇ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ, ದೆಹಲಿಯಲ್ಲೂ ಪ್ರತಿಭಟನೆ ಮಾಡಿದ್ದರು. ಜತೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಆಗುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಶಪಥ ಮಾಡಿದ್ದರು.
SCROLL FOR NEXT