ರಾಜ್ಯ

ಪಿಯು ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕಾರ ಬೆದರಿಕೆ: ಸರ್ಕಾರದಿಂದ ಎಸ್ಮಾ ಜಾರಿಗೆ ಚಿಂತನೆ

Sumana Upadhyaya
ಬೆಂಗಳೂರು: ಮೌಲ್ಯಮಾಪನ ಬಹಿಷ್ಕರಿಸುತ್ತೇವೆ ಎಂದು ಬೆದರಿಕೆ ಹಾಕಿದ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವಿರುದ್ಧ ಎಸ್ಮಾ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಮಾರ್ಚ್ 22ರಂದು ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನ ನಡೆಯಬೇಕಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಪದವಿಪೂರ್ವ ಕಾಲೇಜು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮೌಲ್ಯಮಾಪನ ಬಹಿಷ್ಕರಿಸಿದರೆ ನಿಗದಿತ ಸಮಯಕ್ಕೆ ಫಲಿತಾಂಶ ಬರುವುದಿಲ್ಲ.
ಕರ್ನಾಟಕ ಪದವಿಪೂರ್ವ ಕಾಲೇಜು ಶಿಕ್ಷಕರ ಸಂಘ ಇತ್ತೀಚೆಗೆ ಸಭೆ ನಡೆಸಿ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಹೇಳಿ ಮಾರ್ಚ್ 21ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿತ್ತು.
ಅದಕ್ಕೆ ಪ್ರತಿಯಾಗಿ ಶಿಕ್ಷಣ ಇಲಾಖೆ ಎಸ್ಮಾ ಜಾರಿಗೆ ತರಲು ಮುಂದಾಗಿದೆ. ಈ ಮಧ್ಯೆ ಮೌಲ್ಯಮಾಪನ ಬಹಿಷ್ಕರಿಸದಂತೆ ಉಪನ್ಯಾಸಕರ ಮನವೊಲಿಸಲು ಇಲಾಖೆ ಪ್ರಯತ್ನಿಸಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರದಿಂದ ಯಾವುದನ್ನೂ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲವೆಂದು ಉಪನ್ಯಾಸಕರ ಮನವೊಲಿಸುತ್ತೇವೆ. ಮುಖ್ಯಮಂತ್ರಿಗಳ ಮುಂದೆ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಎಸ್ಮಾ ಜಾರಿಗೆ ತಂದು ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ಇದು ನಮಗೆ ಹೊಸದಲ್ಲ, ನಾವು ಈ ಹಿಂದೆ ಎಸ್ಮಾ ಜಾರಿಯಿಂದ ಬಂಧನಕ್ಕೊಳಗಾಗಿದ್ದೆವು. ನಾವು ಜೈಲಿಗೆ ಬೇಕಾದರೆ ಹೋಗಲು ಸಿದ್ಧವಿದ್ದೇವೆ, ಆದರೆ ನಮ್ಮ ಬೇಡಿಕೆ ಈಡೇರುವವರೆಗೆ ನಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ಪದವಿಪೂರ್ವ ಉಪನ್ಯಾಸಕರ ಸಂಘಟ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.
ಇತಿಹಾಸ ಪುನರಾವರ್ತನೆ
SCROLL FOR NEXT