ರಾಜ್ಯ

ಮಾಧ್ಯಮಗಳು ಪೇಯ್ಡ್ ನ್ಯೂಸ್ ನಿಂದ ದೂರವಿರಬೇಕು, ಸುಳ್ಳು ಸುದ್ದಿ ಹರಡಬಾರದು: ಸಂಜೀವ್ ಕುಮಾರ್

Lingaraj Badiger
ಬೆಂಗಳೂರು: ಚುನಾವಣಾ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮಾಧ್ಯಮಗಳು ಪೇಯ್ಡ್ ನ್ಯೂಸ್ ನಿಂದ ದೂರ ಇರುವ ಜತೆಗೆ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕಿವಿ ಮಾತು ಹೇಳಿದ್ದಾರೆ. 
ಲೋಕಸಭಾ ಚುನಾವಣೆ ಯಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅನಗತ್ಯ ಪೇಯ್ಡ್ ನ್ಯೂಸ್, ಫೇಕ್ ನ್ಯೂಸ್ ಬಗ್ಗೆ ಮಾಧ್ಯಮಗಳು ಸೂಕ್ತ ಮಾಹಿತಿ ಹೊಂದಿರಬೇಕು. ಇಲ್ಲವಾದಲ್ಲಿ ಪ್ರಜಾತಂತ್ರದ ಹಬ್ಬವಾದ ಚುನಾವಣೆಯ ಸಂದರ್ಭದಲ್ಲಿ ತಪ್ಪು ಸಂದೇಶ ಹರಡುವ ಆತಂಕ ಇರುತ್ತದೆ ಎಂದರು. 
ಕರ್ನಾಟಕದ ಮಾಧ್ಯಮಗಳು ಅತ್ಯಂತ ದಕ್ಷ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿವೆ. ಲೋಕಸಭಾ ಚುನಾವಣೆ ಹಬ್ಬವಿದ್ದಂತೆ. ಇದನ್ನು ಯಶಸ್ವಿಗೊಳಿಸಲು ಮಾಧ್ಯಮಗಳು ಶ್ರಮಿಸಬೇಕು. ಮಾಧ್ಯಮಗಳಿಗೂ ಸಹ ನೀತಿ ಸಂಹಿತೆ ಅನ್ವಯವಾಗಲಿದ್ದು, ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಂಡು ಕಾರ್ಯನಿರ್ವಹಿಸಬೇಕು. ಮತದಾರರಿಗೆ ಸಮರ್ಪಕವಾಗಿ ಮಾಹಿತಿ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದರು. 
ಮುದ್ರಣ ಮತ್ತು ವಿದ್ಯುನ್ಮಾಮ ಮಾಧ್ಯಮಗಳ ಜತೆಗೆ ಸಾಮಾಜಿಕ ಜಾಲತಾಣಗಳು ಸಹ ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡುತ್ತವೆ. ಇವುಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ವಿದ್ಯುನ್ಮಾನ ಮತಯಂತ್ರ ಇವಿಎಂಗಳ ವಿಶ್ವಾಸಾರ್ಹತೆ ಹೆಚ್ಚಿದೆ. ಇವುಗಳನ್ನು ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. 
ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯ. ಅನುಮತಿ ಇಲ್ಲದೇ ಯಾವುದೇ ಜಾಹೀರಾತು ಪ್ರಕಟಿಸುವಂತಿಲ್ಲ. ಮಾಧ್ಯಮ ಕಣ್ಗಾವಲು ಸಮಿತಿ ಎಲ್ಲವನ್ನೂ ಅತ್ಯಂತ ನಿಕಟವಾಗಿ ಗಮನಿಸುತ್ತಿರುತ್ತದೆ ಎಂದು ಸಂಜೀವ್ ಕುಮಾರ್ ಹೇಳಿದರು. 
ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ್ ಮಾತನಾಡಿ, ಯಾವುದೇ ಅಭ್ಯರ್ಥಿ ಪರವಾಗಿ ಯಾರೊಬ್ಬರೂ ಜಾಹೀರಾತು ನೀಡುವಂತಿಲ್ಲ. ಜಾಹೀರಾತು ನೀಡುವಂತಿದ್ದರೆ ಸಂಬಂಧಪಟ್ಟ ಅಭ್ಯರ್ಥಿಯ ಅನುಮತಿ ಪತ್ರ ಪಡೆದಿರಬೇಕು. ಇಲ್ಲವಾದಲ್ಲಿ ಜನಪ್ರತಿನಿಧಿ ಕಾಯ್ದೆ 171 ಎಚ್ ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 
ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಪ್ರಕಟಿಸಿದರೆ ಅದರ ವಿನ್ಯಾಸ, ಅದಕ್ಕೆ ತಗಲುವ ವೆಚ್ಚ ಎಲ್ಲವೂ ಸಹ ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಲಾಗುವುದು. ವಿಶೇಷವಾಗಿ ಅಂತರ್ಜಾಲ ಮಾಧ್ಯಮಗಳ ಬಗ್ಗೆ ಈ ಬಾರಿ ಹೆಚ್ಚಿನ ನಿಗಾ ಇಡಲಾಗುವುದು ಎಂದು ಹೇಳಿದರು. 
ಏಪ್ರಿಲ್ 23ಕ್ಕೆ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಲಿದ್ದು, ನಂತರ ಚೆಕ್ ಪೋಸ್ಟ್ ಗಳನ್ನು ರದ್ದುಪಡಿಸಲಾಗುವುದು. ಬಿಗಿ ಕ್ರಮಗಳು ಸಡಿಲಗೊಳ್ಳಲಿವೆ. ಆದರೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದರು.
SCROLL FOR NEXT