ಸಚಿವ ರೇವಣ್ಣ ಭರವಸೆ ನೀಡಿದರಷ್ಟೇ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ: ಹಾಸನ ಕಾಂಗ್ರೆಸ್ ಮುಖಂಡರ ಷರತ್ತು
ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ. ಜೆಡಿಎಸ್ ನಾಯಕರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಸಚಿವ ರೇವಣ್ಣ ಖುದ್ದಾಗಿ ಭರವಸೆ ನೀಡಿದರಷ್ಟೇ ಮೈತ್ರಿ ಅಭ್ಯರ್ಥಿಗೆ ಬೆಂಬಲ.ಇಲ್ಲದಿದ್ದಲ್ಲಿ ಜೆಡಿಎಸ್ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹಾಸನ ಜಿಲ್ಲಾ ಮುಖಂಡರು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ ಕೈಗೊಳ್ಳಲಾದ ಯೋಜನೆಗಳನ್ನು ಪೂರ್ಣಗೊಳಿಸಬೇಕು.ಕಾಂಗ್ರೆಸ್ ಮುಖಂಡರ ಬೇಡಿಕೆಗಳನ್ನು ಆದ್ಯತೆ ಆಧರಿಸಿ ಪೂರೈಸಬೇಕು.ಕಾರ್ಯಕರ್ತರ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸಬೇಕು.ಸಚಿವ ರೇವಣ್ಣ ಕಾಂಗ್ರೆಸ್ ಮುಖಂಡರ ಜೊತೆ ನೇರ ಸಮಾಲೋಚನೆ ನಡೆಸಬೇಕು.ಎಲ್ಲವನ್ನು ಮಾಧ್ಯಮಗಳ ಸಮಕ್ಷಮದಲ್ಲಿ ನಡೆಸಬೇಕು.ಈ ಬಗ್ಗೆ ಸ್ಪಷ್ಟ ಭರವಸೆಯನ್ನು ರೇವಣ್ಣ ನೀಡಿದರೆ ಮಾತ್ರ ತಾವು ಜೆಡಿಎಸ್ ಅಭ್ಯರ್ಥಿಗೆ ಬೆಂಬಲಿಸುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮುಖಂಡರ ಬೇಡಿಕೆಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದು,ನಾಳೆ ಸಚಿವ ರೇವಣ್ಣ ಅವರ ಜೊತೆ ಚರ್ಚೆ ನಡೆಸಿ ಹಾಸನದಲ್ಲಿ ಸಭೆ ನಡೆಸಲು ದಿನಾಂಕ ನಿಗದಿ ಮಾಡಲು ಸೂಚಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.ಅಲ್ಲದೆ ಕಾಂಗ್ರೆಸ್ ಮುಖಂಡರ ಜೊತೆ ನೇರ ನೇರ ಚರ್ಚೆಗೆ ಸೂಕ್ತ ವೇದಿಕೆ ಕಲ್ಪಿಸುವಂತೆಯೂ ಸಿದ್ದರಾಮಯ್ಯ ರೇವಣ್ಣ ಅವರಿಗೆ ನಿರ್ದೇಶನ ನೀಡಲಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಗಂಡಸಿ ಶಿವರಾಂ, ರಾಜ್ಯಮಟ್ಟದಲ್ಲಿ ಮೈತ್ರಿ ಇದ್ದರೂ ಹಾಸನದಲ್ಲಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.ರೇವಣ್ಣ ಅವರನ್ನು ಕರೆಸಿ ಮಾತನಾಡುವುದಾಗಿ ತಿಳಿಸಿದ್ದಾರೆ. ಈ ಗೊಂದಲಗಳನ್ನು ಸಿದ್ದರಾಮಯ್ಯ ಅವರು ಬಗೆಹರಿಸುವ ವಿಶ್ವಾಸವಿದೆ. ಎಲ್ಲಾ ಗೊಂದಲಗಳ ಬಗೆಹರಿಸುವ ಭರವಸೆ ನಡುವೆಯೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರನ್ನು ಬೆಂಬಲಿಸುವಂತೆ ಸಿದ್ದರಾಮಯ್ಯಹಾಸನದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos