ರಾಜ್ಯ

ಧಾರವಾಡದಲ್ಲಿ ಕಟ್ಟಡ ಕುಸಿತ: ಸಿಎಂ ಪರಿಹಾರ ಘೋಷಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ!

Sumana Upadhyaya
ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದು ಹತ್ತಾರು ಜನರ ಸಾವು ನೋವಿಗೆ ಕಾರಣವಾದವರನ್ನು ಕಾನೂನಿನ ವ್ಯಾಪ್ತಿಯಡಿ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ, ಅವರು ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ದರೂ ಸಹ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಿನ್ನೆ ಧಾರವಾಡದಲ್ಲಿ ಕಟ್ಟಡ ಕುಸಿತದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಮಾತನಾಡಿಸಿದರು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಮತ್ತು ಗಾಯಾಳುಗಳಿಗೆ ಯಾವುದೇ ಪರಿಹಾರ ಘೋಷಿಸಲಿಲ್ಲ.
ಕಟ್ಟಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅಲ್ಲಿನ ಪರಿಸ್ಥಿತಿ ಹಾಗೂ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದರು. ರಾಷ್ಟ್ರೀಯ ರಕ್ಷಣಾ ಕಾರ್ಯಪಡೆಯ ತಂಡಗಳ ಜೊತೆ ಉನ್ನತ ಮಟ್ಟದ ಅಧಿಕಾರಿಗಳು ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ತಂಡ ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪರಿಸ್ಥಿತಿಯ ಬಗ್ಗೆ ವಿವರ ನೀಡಿತು.
ಕಟ್ಟಡಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕಟ್ಟಡ ಕುಸಿಯಲು ಕಾರಣವಾಗಿರಬಹುದು ಎಂದು ತಮಗೆ ಮಾಹಿತಿ ಬಂದಿದೆ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ಹೇಳಿದರು. 5 ಹಂತದ ನಿರ್ಮಾಣ ಕಟ್ಟಡ ಕುಸಿದಿದೆ ಎಂದು ಮುಖ್ಯ ಕಾರ್ಯದರ್ಶಿಗಳು ನನಗೆ ಮಾಹಿತಿ ನೀಡಿದಾಗ ನಾನು ಆಶ್ಚರ್ಯಪಟ್ಟೆ. ಕೂಡಲೇ ಜಿಲ್ಲಾಡಳಿತವನ್ನು ಸಂಪರ್ಕಿಸಿ ತಕ್ಷಣ ತುರ್ತು ಪರಿಹಾರ ಕಾಮಗಾರಿ ನಡೆಸುವಂತೆ ಸೂಚಿಸಿದೆನು. ಜಿಲ್ಲಾಡಳಿತ ಸರಿಯಾದ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾಡಳಿತದಿಂದ ಪರಿಹಾರ: ಸ್ಥಳೀಯ ಆಡಳಿತ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಘೋಷಿಸಿದೆ. ಅದರ ಆಧಾರದ ಮೇಲೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಘೋಷಣೆ ಮಾಡಲಿದೆ ಎಂದು ಸಿಎಂ ಹೇಳಿದರು.
SCROLL FOR NEXT