ರಾಜ್ಯ

ವಿಜಯಪುರ: ವಾಟ್ಸ್ ಆಪ್ ನಲ್ಲಿ ಎಸ್ಎಸ್ಎಲ್ ಸಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ಇಲ್ಲ

Lingaraj Badiger
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಎಸ್‍ಎಸ್‍ಎಲ್ ಸಿ  ಗಣಿತ ಪ್ರಶ್ನೆ ಪತ್ರಿಕೆ ವಾಟ್ಸ್ ಆಪ್ ಮೂಲಕ ಸೋರಿಕೆ ಆಗಿದ್ದನ್ನು ಡಿಡಿಪಿಐ ಪ್ರಸನ್ನ ಕುಮಾರ್ ಅವರು ಸೋಮವಾರ ಖಚಿತಪಡಿಸಿದ್ದಾರೆ.
ಇಂದು ಬೆಳಗ್ಗೆ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಗಣಿತ ಪರೀಕ್ಷೆ ಆರಂಭವಾಗಿದ್ದು, 11 ಗಂಟೆಯ ಸುಮಾರಿಗೆ ವಾಟ್ಸ್ ಆಪ್ ನಲ್ಲಿ ಪ್ರಶ್ನೆ ಪತ್ರಿಕೆ ಹರಿದಾಡುತ್ತಿತ್ತು. ಮೊರಟಗಿ ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಪತ್ರಿಕೆ ಸೋರಿಕೆಯಾದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಡಿಪಿಐ ಪ್ರಸನ್ನ ಕುಮಾರ್ ಅವರು ಪರಿಶೀಲನೆ ನಡೆಸಿದರು. 
ನಮ್ಮ ಬಳಿ ಇದ್ದ ಮೂಲ ಪ್ರತಿ ಮತ್ತು ವಾಟ್ಸಪ್ ಪ್ರತಿಯೊಂದಿಗೆ ತುಲನೆ ಮಾಡಿದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುದು ಪತ್ತೆಯಾಗಿದೆ ಎಂದು ಪ್ರಸನ್ನ ಕುಮಾರ್ ಅವರು ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ತಿಳಿಯುತ್ತಲೇ ಮೊರಟಗಿ ಪರೀಕ್ಷಾ ಕೇಂದ್ರಕ್ಕೆ ಬಿಇಓ ಆಗಮಿಸಿ ಸಿಬ್ಬಂದಿಯಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಸಂಬಂಧ ಸಿಂಧಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಪ್ರಸನ್ನ ಕುಮಾರ್ ಅವರು ತಿಳಿಸಿದ್ದಾರೆ. ಆದರೆ ಮರು ಪರೀಕ್ಷೆ ನಡೆಸುವುದಿಲ್ಲ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ ಸುಮಂಗಲಾ ಅವರು ಹೇಳಿದ್ದಾರೆ.
SCROLL FOR NEXT