ರಾಜ್ಯ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

Sumana Upadhyaya

ಉಡುಪಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮಂಗಳವಾರ ಭೇಟಿ ನೀಡಿದ್ದಾರೆ. ಕನಕನ ಕಿಂಡಿ ಮೂಲಕ ದೇವರ ದರ್ಶನ ಮಾಡಿದ್ದಾರೆ.

ಉಡುಪಿಯ ಕೃಷ್ಣಮಠದಲ್ಲಿ ಕೃಷ್ಣನ ದರ್ಶನ ಮಾಡಿ, ಪಲಿಮಾರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ವೇಳೆ ಪಲಿಮಾರು ಶ್ರೀಗಳ ಮುಂದೆ ರಕ್ಷಣಾ ಸಚಿವೆ ಮನವಿಯೊಂದನ್ನು ಇಟ್ಟಿದ್ದಾರೆ. 'ಆಧ್ಯಾತ್ಮಿಕ ಶ್ರೀಗಳಲ್ಲಿ ನನ್ನ ಲೌಕಿಕ ವಿನಂತಿ ಇದೆ. ಈ ಬಾರಿ ಕೃಷ್ಣನಲ್ಲಿ ದೇಶಕ್ಕಾಗಿ ಪ್ರಾರ್ಥಿಸಬೇಕು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ದೇಶ ಸುರಕ್ಷಿತರ ಕೈಯಲ್ಲಿರುವಂತೆ ದೇವರಲ್ಲಿ ಪ್ರಾರ್ಥಿಸಿ, ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವಂತೆ ಆಶೀರ್ವದಿಸಿ' ಎಂದು ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಸ್ವಾಮೀಜಿ ಬಳಿ ನಿರ್ಮಲಾ ಸೀತಾರಾಮನ್ ವಿನಂತಿ ಮಾಡಿಕೊಂಡರು.
ಉಡುಪಿ ಜೊತೆ ನನಗೆ ಒಂದನೇ ವರ್ಷದಿಂದ ನಂಟು ಇದೆ. ಕೊಲ್ಲೂರು, ಕೃಷ್ಣಮಠದ ಜೊತೆ ನಿರಂತರ ಸಂಪರ್ಕವಿದೆ. ಮಠದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪಲಿಮಾರು ಶ್ರೀಗಳಿಗೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಲಿಮಾರು ಶ್ರೀಗಳು ಮಾತನಾಡಿ, ವಿಂಗ್​ ಕಮಾಂಡರ್​ ಅಭಿನಂದನ್​ ಅವರನ್ನು ಉಡುಪಿಗೆ ಕಳುಹಿಸಿಕೊಡಿ, ಕೃಷ್ಣಮಠದಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕು. ನಮಗೆ ಅಭಿನಂದನ್​​ ಅವರ ಪರಾಕ್ರಮ ಬಹಳ ಮೆಚ್ಚುಗೆಯಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್​, ಕಾನೂನಾತ್ಮಕ ಅಡೆ-ತಡೆ ಇಲ್ಲದಿದ್ದರೆ ಕಳುಹಿಸಿಕೊಡುತ್ತೇವೆ. ರಕ್ಷಣಾ ಇಲಾಖೆಗೆ ಒಂದು ಪತ್ರ ಬರೆಯಿರಿ ಎಂದರು.
SCROLL FOR NEXT