ಮಲೆಮಹದೇಶ್ವರಬೆಟ್ಟದ ಪೊನ್ನಾಚಿಯಲ್ಲಿ ಕಾಳ್ಗಿಚ್ಚು
ಚಾಮರಾಜನಗರ: ರಾಜ್ಯದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ವಾರಗಳ ಕಾಲ ಹಬ್ಬಿದ ಕಾಳ್ಗಿಚ್ಚಿನಿಂದ ಸಾವಿರಾರು ಎಕರೆ ಅರಣ್ಯ ಸುಟ್ಟು ಭಸ್ಮವಾದ ನೆನಪು ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದೆ. ಈ ಬಾರಿ ಚಾಮರಾಜನಗರ ಜಿಲ್ಲೆ ಪ್ರಸಿದ್ದ ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಕಾಳ್ಗಿಚ್ಚು ರುದ್ರ ನರ್ತನ ತೋರಿದೆ.
ಮಲೆಮಹದೇಶ್ವರ ಬೆಟ್ಟದ ಕಾವೇರಿ ವನ್ಯ ಜೀವಿ ಧಾಮ, ಹನೂರು ತಾಲೂಕಿನ ಪೊನ್ನಾಚಿಯ ಬೆಟ್ಟದ ವ್ಯಾಪ್ತಿಯಲ್ಲಿ ಬೆಂಕಿ ವ್ಯಾಪಿಸಿದ್ದು ನೂರಕ್ಕೆ ಹೆಚ್ಚು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ ಎನ್ನಲಾಗುತ್ತಿದೆ.
ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಪಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಣ್ಣದಾಗಿ ಕಾಣಿಸಿಕೊಂಡಿದ್ದ ಬೆಂಕಿ.ಇಂದು ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ.
"ಕ್ಷುಲ್ಲಕ ಕಾರಣಕ್ಕಾಗಿ ಹಚ್ಚುವ ಬೆಂಕಿಗೆ ಸಾವಿರಾರು ಎಕರೆ ಅರಣ್ಯ ನಾಶವಾಗುತ್ತಿದ್ದು ಗಿಡಮರಗಳು, ಪ್ರಾಣಿ ಸಂಕುಲನಶಿಸುತ್ತಿದೆ. ಬೆಟ್ಟ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿರುವ ಕಾರಣ ಮಾನವ ಪ್ರಯತ್ನದಿಂದ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಬೆಂಕಿ ಹಚ್ಚಿದವರ ಸುಳಿವು ಲಭ್ಯವಾಗಿದ್ದು ಇನ್ನೆರಡು ದಿನಗಳಲ್ಲಿ ಬಂಧಿಸಲಿದ್ದೇವೆ" ಎಂದು ಮಲೆಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹೇಳಿದ್ದಾರೆ.