ಬೆಂಗಳೂರು: ಮೌಲ್ಯಮಾಪನ ತಿರಸ್ಕರಿಸುವ ಪದವಿಪೂರ್ವ ಇಲಾಖೆ ಉಪನ್ಯಾಸಕರಿಗೆ ಸರ್ಕಾರ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಮೌಲ್ಯಮಾಪನ ಆದೇಶ ಸಿಕ್ಕಿ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಲ್ಲಾ ಉಪನ್ಯಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮೌಲ್ಯಮಾಪಕರಿಗೆ ಇಲಾಖೆ ಎಸ್ಎಂಎಸ್ ಕಳುಹಿಸಿದ್ದು, ಸಂದೇಶದಲ್ಲಿ ಇಲಾಖೆ ಮೌಲ್ಯಮಾಪನ ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೇಳಲಾಗಿದೆ.
ಕಳೆದ ಮಾರ್ಚ್ 25ರಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿತ್ತು. ಒಟ್ಟು 18,346 ಸಹಾಯಕ ಮೌಲ್ಯಮಾಪಕರಲ್ಲಿ ಮೊದಲ ದಿನ ಕರ್ತವ್ಯಕ್ಕೆ ಹಾಜರಾಗಿದ್ದು ಕೇವಲ 11,817 ಮಂದಿ ಉಪನ್ಯಾಸಕರು ಮಾತ್ರ. ನಿನ್ನೆ ಒಟ್ಟು 21 ಸಾವಿರ ಮೌಲ್ಯಮಾಪಕರಲ್ಲಿ ಶೇಕಡಾ 6ರಷ್ಟು ಮಂದಿ ಗೈರಾಗಿದ್ದರು.
ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಪೂರ್ವ ನಿಗದಿತ ಕಾರ್ಯಕ್ರಮಗಳು ಮತ್ತು ದ್ವಿತೀಯ ಪಿಯುಸಿಯ ಮಕ್ಕಳಿರುವ ಮೌಲ್ಯಮಾಪಕರನ್ನು ಹೊರತುಪಡಿಸಿ ಮತ್ತು ಇಲಾಖೆಯಿಂದ ಪೂರ್ವ ಅನುಮತಿ ಪಡೆದವರನ್ನು ಹೊರತುಪಡಿಸಿ ಎಲ್ಲರೂ ಮೌಲ್ಯಮಾಪನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
2018ರಲ್ಲಿ ಜಾರಿಗೆ ಬಂದ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ತಿದ್ದುಪಡಿಯಡಿ ಮೌಲ್ಯಮಾಪನ ಬಹಿಷ್ಕರಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ ವಿವಿಧ ಅನಾರೋಗ್ಯ ಕಾರಣಗಳಿಂದ ಶೇಕಡಾ 3ರಷ್ಟು ಮೌಲ್ಯಮಾಪಕರು ವಿನಾಯ್ತಿ ಕೇಳಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆಯಿರುವುದರಿಂದ ಮತ್ತು ಮುಂದೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ವಿವಿಧ ಕೋರ್ಸ್ ಗಳಿಗೆ ಸೇರಲು ಅನುಕೂಲವಾಗಲು ಏಪ್ರಿಲ್ ಮೊದಲ ಅಥವಾ ಎರಡನೇ ವಾರದಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಉದ್ದೇಶ ಇಲಾಖೆಯ ಮುಂದಿದೆ.
ಈ ಬಾರಿ ಮೌಲ್ಯಮಾಪನ ಮಾಡಿ ಆನ್ ಲೈನ್ ನಲ್ಲಿ ಅಂಕ ನೀಡಬೇಕೆನ್ನುವುದು ಕೆಲವು ಉಪನ್ಯಾಸಕರಿಗೆ ಕಷ್ಟವೆನಿಸಿದೆ. ತಾಂತ್ರಿಕವಾಗಿ ಕೆಲವರು ಪಳಗಿಲ್ಲ. ಇನ್ನು ಕೆಲವು ಕೇಂದ್ರಗಳಲ್ಲಿ ಕಂಪ್ಯೂಟರ್ ಸಿಸ್ಟಮ್ ನಿಂದ ವಿಳಂಬವಾಗುತ್ತಿದೆ. ನಮ್ಮ ಕೇಂದ್ರದಲ್ಲಿ ಸುಮಾರು 500 ಮೌಲ್ಯಮಾಪಕರಿದ್ದಾರೆ. ಆದರೆ ಕೇವಲ 15 ಕಂಪ್ಯೂಟರ್ ಗಳನ್ನು ನೀಡಲಾಗಿದೆ ಎನ್ನುತ್ತಾರೆ ಉಪನ್ಯಾಸಕರೊಬ್ಬರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos