ರಾಜ್ಯ

ಖಾಸಗಿ ಬಸ್ ಮಾಲೀಕರೇ ಹುಷಾರ್, ಪ್ರಯಾಣಿಕರಿಂದ ಹಣ ಸುಲಿಗೆ ಮಾಡಿದರೆ ಕಾದಿದೆ ಶಿಕ್ಷೆ!

Sumana Upadhyaya
ಬೆಂಗಳೂರು: ನಿಮ್ಮ ಊರಲ್ಲಿ ಬರುವ ಲೋಕಸಭೆ ಚುನಾವಣೆಗೆ ಮತ ಹಾಕಲು ಹೋಗಲು ಖಾಸಗಿ ಬಸ್ ನಲ್ಲಿ ಪ್ರಯಾಣಿಸಿದರೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಖಾಸಗಿ ಬಸ್ ಗಳು ನಿಗದಿಗಿಂತ ಹೆಚ್ಚು ಪ್ರಯಾಣ ದರ ವಿಧಿಸಿದರೆ ನೀವು ಸ್ಥಳೀಯ ಸಾರಿಗೆ ಪ್ರಾಧಿಕಾರಕ್ಕೆ ದೂರು ನೀಡಬಹುದು.
ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ಅಧಿಕ ಪ್ರಯಾಣ ದರ ಸುಲಿಗೆ ಮಾಡುವುದು ಕಂಡುಬಂದರೆ ಕೇಸು ದಾಖಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಆಯುಕ್ತ ವಿಪಿ ಇಕ್ಕೇರಿ ಆದೇಶಿಸಿದ್ದಾರೆ. ಖಾಸಗಿ ಬಸ್ ಗಳ ಲೈಸೆನ್ಸ್ ರದ್ದಾಗುವ ಸಾಧ್ಯತೆ ಕೂಡ ಇದೆ.
ವಿಶೇಷ ಸಮಯಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಖಾಸಗಿ ಬಸ್ ನಿರ್ವಾಹಕರು ತಮ್ಮ ಮನಸೋ ಇಚ್ಛೆ ಬಸ್ ಪ್ರಯಾಣ ದರ ಏರಿಕೆ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕೂಡ ಅಧಿಕ ದರ ವಿಧಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಸಾರಿಗೆ ಇಲಾಖೆ ಪ್ರಾಧಿಕಾರಗಳಿಗೆ ದೂರವಾಣಿ ಅಥವಾ ಇಮೇಲ್ ಮೂಲಕ ದೂರು ನೀಡಬಹುದು. ಬಸ್ ನಿರ್ವಾಹಕರ ಹೆಸರು, ಸಮಯ ಮತ್ತು ದಾರಿಯ ವಿವರಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಖಾಸಗಿ ಬಸ್ ನಿರ್ವಾಹಕರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಗತ್ಯಬಿದ್ದರೆ ಪರವಾನಗಿಯನ್ನು ಕೂಡ ರದ್ದುಪಡಿಸಬಹುದು ಎಂದರು.
ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ 2,023 ಖಾಸಗಿ ಬಸ್ ಗಳ ಮೇಲೆ ಕೇಸು ದಾಖಲಿಸಿ 1.35 ಕೋಟಿ ದಂಡ ವಿಧಿಸಿದ್ದೇವೆ ಎಂದು ಇಕ್ಕೇರಿ ಹೇಳಿದರು. ಬಸ್ ದರ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಿದ ಇಕ್ಕೇರಿ, 2014ರಲ್ಲಿ ಬಸ್ ದರವನ್ನು ಪರಿಷ್ಕರಣೆ ಮಾಡಿದ್ದೇವೆ. ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಕಾರ್ಯನಿರ್ವಾಹಕರು ಶೇಕಡಾ 18ರಷ್ಟು ಬಸ್ ದರ ಹೆಚ್ಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಬೇಡಿಕೆ ರಾಜ್ಯ ಸರ್ಕಾರದ ಮುಂದಿದೆ. ಅಂತರಾಜ್ಯ ಬಸ್ ಟಿಕೆಟ್ ದರ ಪರಿಷ್ಕರಣೆ ಕೂಡ ಮನವಿ ಹಂತದಲ್ಲಿದೆ. ಚುನಾವಣೆ ನಂತರವೇ ತೀರ್ಮಾನ ತೆಗೆದುಕೊಳ್ಳಬಹುದು ಸರ್ಕಾರ ಎಂದರು.
SCROLL FOR NEXT