ರಾಜ್ಯ

ಬೆಂಗಳೂರು: ಸಿಎಂ ಉಡುಪಿ ಪ್ರವಾಸದ ಕುರಿತು 'ಸುಳ್ಳುಸುದ್ದಿ', ಪತ್ರಕರ್ತ ಸೇರಿ ಇಬ್ಬರ ಬಂಧನ

Raghavendra Adiga
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಯುರ್ವೇದ ಚಿಕಿತ್ಸೆ ಪಡೆಯಲು ಉಡುಪಿಗೆ ತೆರಳಿದ್ದ ಕುರಿತು "ಸುಳ್ಳು ಸುದ್ದಿ" ಪ್ರಕಟಿಸಿದ ಪತ್ರಕರ್ತ ಹಾಗೂ ಅದನ್ನು ಸಾಮಾಜಿಕ ತಾಣದಲ್ಲಿ ಟ್ರೋಲ್ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಹೈಗ್ರೌಂಡ್ಸ್ ಪೋಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಗಂಗಾಧರ ಮತ್ತು ಅಜೀತ್‍ಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕಿತ್ಸೆಗಾಗಿ ಉಡುಪಿಯ ಕಾಪುವಿನಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದನ್ನು ನೆಪ ಮಾಡಿಕೊಂಡು ಅವರು ದೇವಸ್ಥಾನಕ್ಕೆ ತೆರಳಿದಂತೆ, ಅಲ್ಲಿಗೆ ರಾಧಿಕಾ ಕುಮಾರಸ್ವಾಮಿ ಸಹ ಆಗಮಿಸಿದಂತೆ ಫೋಟೋ ಸೃಷ್ಟಿಸಿ ನಕಲಿ ಸುದ್ದಿಯನ್ನು ಪ್ರಕಟಿಸಿದ್ದರು. ಅಲ್ಲದೆ ಅದನ್ನು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು.
ಈ ನಕಲಿ ಸುದ್ದಿ ಸಾಮಾಜಿಕ  ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿಗಳ ಮಾದ್ಯಮ ಕಾರ್ಯದರ್ಶಿ ಎಚ್.ಬಿ. ದಿನೇಶ್ ಈ ಸಂಬಂಧ ಹೈಗ್ರೌಂಡ್ಸ್ ಪೋಲೀಸರಿಗೆ ದೂರಿತ್ತಿದ್ದಾರೆ.
ದೂರಿನ ಸಂಬಂಧ ತನಿಖೆ ನಡೆಸಿದ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ನಡುವೆ ಕಾಪು ಸಮೀಪದ ಮುಳೂರು ಸಾಯಿರಾಧ ರೆಸಾರ್ಟ್ ನಲ್ಲಿ ಕಳೆದೈದು ದಿನಗಳಿಂದ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಇಂದು ಅಪರಾಹ್ನದ ವೇಳೆಗೆ ಚಿಕಿತ್ಸೆ ಮುಗಿಸಿಕೊಂಡು ಚಿಕ್ಕಮಗಳೂರಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
SCROLL FOR NEXT