ಹೈದ್ರಾಬಾದ್: ಮೆಹಬೂಬ್ ನಗರ ಜಿಲ್ಲೆಯ ಜನರ ಕುಡಿಯುವ ನೀರಿನ ಅಗತ್ಯಕ್ಕಾಗಿ ತೆಲಂಗಾಣ ಕೋರಿಕೆಯ ಮೇರೆಗೆ, ನಾರಾಯಣಪುರ ಜಲಾಶಯದಿಂದ ಜುರಾಲ ಯೋಜನೆಗೆ ಎರಡೂವರೆ ಟಿಎಂಸಿ ನೀರು ಬಿಡುಗಡೆಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ.
ಮೆಹಬೂಬ್ ನಗರ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳ ಮಟ್ಟಕ್ಕೆ ಇಳಿದಿರುವ ಹಿನ್ನಲೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಸಲು ನಾರಾಯಣ ಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮೆಹಬೂಬ್ ನಗರ ಜಿಲ್ಲೆಗೆ ನೀರು ಬಿಡುಗಡೆಗೆ ನಿರ್ಧರಿಸಿದ್ದಾರೆ.
ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ದೂರವಾಣಿ ಮೂಲಕ ನೀರು ಬಿಡುಗಡೆಯ ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೆಹಬೂಬ್ ನಗರ ಜಿಲ್ಲೆಯ ಜನರಿಗೆ ಇದೊಂದು ಸಂತೋಷ ಹಾಗೂ ಶುಭ ಸುದ್ದಿ ಎಂದು ಚಂದ್ರಶೇಖರ್ ರಾವ್ ಬಣ್ಣಿಸಿದ್ದಾರೆ.
ನೀರು ಬಿಡುಗಡೆ ಮಾಡಲು ನಿರ್ಧರಿಸಿರುವುದಕ್ಕೆ ಜಿಲ್ಲೆಯ ಜನರ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೆ. ಚಂದ್ರ ಶೇಖರ್ ರಾವ್ ಧನ್ಯವಾದ ತಿಳಿಸಿದ್ದಾರೆ.
ಉಭಯ ರಾಜ್ಯಗಳ ನಡುವೆ ಸ್ನೇಹಯುತ ಹಾಗೂ ಹಾರ್ಧಿಕ ಭಾಂದವ್ಯ ಎಂದೆಂದಿಗೂ ಇದೇರೀತಿ ಮುಂದುವರಿಯಬೇಕು ಎಂದು ಉಭಯ ಮುಖ್ಯಮಂತ್ರಿಗಳು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ಜುರಾಲ ಯೋಜನೆಗೆ ಇಂದು ಸಂಜೆಯಿಂದ ನೀರು ಹರಿಯಲು ಆರಂಭಿಸಲಿದೆ ಎಂದು ತಿಳಿಸಲಾಗಿದೆ.