ರಾಜ್ಯ

ಟಿಡಿಆರ್‌ ಹಗರಣ: ಎಸಿಬಿಯಿಂದ ಮತ್ತೆ 5 ಕಡೆ ದಾಳಿ, ಮಹತ್ವದ ದಾಖಲೆಗಳ ವಶ

Srinivasamurthy VN
ಬೆಂಗಳೂರು: ಬಿಬಿಎಂಪಿಯ ಬಹುಕೋಟಿ ಟಿಡಿಆರ್ ಹಗರಣದ ತನಿಖೆ ತೀವ್ರಗೊಳಿಸಿರುವ ಎಸಿಬಿ ಅಧಿಕಾರಿಗಳು, ಇಂದು ಬೆಳ್ಳಂಬೆಳಗ್ಗೆ 4 ಆಪಾದಿತ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 5 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ವಾಲ್ ಮಾರ್ಕ್ ರಿಯಾಲಿಟಿ ಹೋಲ್ಡಿಂಗ್ ಕಂಪನಿಯ ನಿರ್ದೇಶಕ ರತನ್ ಬಾಬುಲಾಲ್ ಲಾಥ್ ಅವರ ಮನೆ, ವಾಲ್ ಮಾರ್ಕ್ ರಿಯಾಲಿಟಿ ಹೋಲ್ಡಿಂಗ್ ಕಂಪನಿಯ ನೌಕರ ಅಮೀತ್ ಜೆ.ಬೋಳಾರ್ ಅವರ ಇಂದಿರಾನಗರದ ಮನೆ, ಹೊರಮಾವು ಕಲ್ಕೆರೆ ಮುಖ್ಯ ರಸ್ತೆಯಲ್ಲಿರುವ ಕೆ.ಗೌತಮ್ ಅವರ ಮನೆ ಹಾಗೂ ಮುನಿರಾಜಪ್ಪ ಎಂಬವರ ಕಲ್ಕೆರೆ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ಬಿಡಿಎಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಲಾಲ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆಯ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾಗಿರುವ ಸೈಟುಗಳು ಮತ್ತು ಕಟ್ಟಡಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದೀಕರಣ ಮಾಡಿದ್ದರು. ಈ ಮೂಲಕ ಅವರು ಖಾಸಗಿ ವ್ಯಕ್ತಿಗಳಿಗೆ ಅಪಾರ ಪ್ರಮಾಣದಲ್ಲಿ ಅಕ್ರಮದ ಲಾಭ ಮಾಡಿಕೊಟ್ಟಿದ್ದರು. ಇದರಿಂದ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವನ್ನುಂಟು ಮಾಡಿದ್ದರು. ಈ ಬಗ್ಗೆ ಎಸಿಬಿ ತನಿಖೆ ಆರಂಭಿಸಿ ಕೃಷ್ಣಲಾಲ್ ಅವರ ಮನೆ, ಕಚೇರಿ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು. 
ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ವಿವಿಧ ತಂಡ ಈ ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
SCROLL FOR NEXT