ರಾಜ್ಯ

ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ: ಬೆಂಗಳೂರಿನಲ್ಲಿ ಮುಂದುವರೆದ ಕಟ್ಟೆಚ್ಚರ

Lingaraj Badiger
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ದಾಳಿ ನಡೆಸುವ ಸಂಬಂಧ ಬೆದರಿಕೆ ಕರೆ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಶ್ರೀಲಂಕಾ ರಾಜಧಾನಿ ಕೊಲಂಬೋ ಬಳಿ ನಡೆದ ಸರಣಿ ಬಾಂಬ್ ಸ್ಪೋಟ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ನಗರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಅದರಂತೆ ಎಂದಿನಂತೆ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಅಕ್ಕಪಕ್ಕದ ರಾಜ್ಯಗಳು ಮತ್ತು ಕರ್ನಾಟಕದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ದಾಳಿಯಾಗಬಹುದೆಂಬ ಮಾಹಿತಿ ಮೇರೆಗೆ ಕಟ್ಟೆಚ್ಚರ ವಹಿಸಲಾಗಿತ್ತು. ಇದೀಗ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿಯೂ ಇದು ಮುಂದುವರೆದಿದೆ ಎಂದು ಅವರು ತಿಳಿಸಿದರು.
ಕಳೆದ ಏಪ್ರಿಲ್ 21 ರಂದು ಕೋಲಂಬೋ ಬಳಿ 8 ಕಡೆಗಳಲ್ಲಿ ನ್ಯಾಷನಲ್ ತೌಹಿತ್ ಜಮಾತ್ ಸಂಘಟನೆಯ ಉಗ್ರರು ನಡೆಸಿದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 250 ಕ್ಕೂ ಹೆಚ್ಚು ಜನ  ಮೃತಪಟ್ಟು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 
ಏಪ್ರಿಲ್ 26 ರ ಶುಕ್ರವಾರ ಸ್ವಾಮಿ ಸುಂದರ್ ಮೂರ್ತಿ ಎಂಬ ಹೆಸರಿನ ಲಾರಿ ಡ್ರೈವರ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಗೋವಾ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಉಗ್ರರ ದಾಳಿ ನಡೆಯಬಹುದು. ರೈಲಿನಲ್ಲಿ ಸ್ಫೋಟ ಸಂಭವಿಸಬಹುದು. 19 ಜನ ಉಗ್ರರು ತಮಿಳುನಾಡಿನ ರಾಮನಾಥ ಪುರಂಗೆ ಬಂದಿದ್ದಾರೆಂದು ಮಾಹಿತಿ ನೀಡಿದ್ದರು. ಈ ಸಂಬಂಧ ಕರ್ನಾಟಕದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದು ತುರ್ತು ವಿಷಯ. ಭಾರತದ 8 ರಾಜ್ಯಗಳ ಪ್ರಮುಖ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಏಪ್ರಿಲ್ 27 ರಂದು ಅಕ್ಕಪಕ್ಕ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ನೀಲಮಣಿ ರಾಜು ಅವರು ಪತ್ರ ಬರೆದಿದ್ದರು. 
ನ್ಯಾಷನಲ್ ತೌಹಿತ್ ಜಮಾತ್ ಸಂಘಟನೆಯಿಂದ ದಕ್ಷಿಣದ ರಾಜ್ಯಗಳಲ್ಲಿ ದಾಳಿ ನಡೆಸಬಹುದು ಎಂಬ ಸೂಚನೆಯನ್ನು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನೀಡಿದ್ದು, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಬೇಕು. ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸುವಂತೆ ನಿರ್ದೇಶಿಸಲಾಗಿದೆ ಎನ್ನಲಾಗಿದೆ.
SCROLL FOR NEXT