ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ಕೃಷ್ಣಾ ನದಿ ಮತ್ತು ಅದರ ಉಪ ನದಿಗಳಿಗೆ 2 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಒಪ್ಪಿಕೊಂಡಿದ್ದಾರೆ.
ಇದರಿಂದ ಉತ್ತರ ಕರ್ನಾಟಕ ಬರಗಾಲ ಪೀಡಿತ ಪ್ರದೇಶಗಳಿಗೆ ನೀರಿಗೆ ಸ್ವಲ್ಪ ಸಹಾಯವಾಗಲಿದೆ. ಉತ್ತರ ಕರ್ನಾಟಕದ ಬಿಜೆಪಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ನೇತೃತ್ವದಲ್ಲಿ ಬಿಜೆಪಿ ನಾಯಕರು ಮತ್ತು ಶಾಸಕರ ನಿಯೋಗ ಮುಂಬೈಯಲ್ಲಿ ನಿನ್ನೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ತಕ್ಷಣವೇ ನೀರು ಬಿಡುಗಡೆ ಮಾಡಬೇಕೆಂದು ಉತ್ತರ ಕರ್ನಾಟಕದ ಬರಗಾರ ಪರಿಸ್ಥಿತಿ ಬಗ್ಗೆ ವಿವರಿಸಿದ್ದರು.
ನಿಯೋಗದಲ್ಲಿ ರಾಜ್ಯದ ವಿರೋಧಪಕ್ಷದ ಮುಖ್ಯ ಸಚೇತಕ ಮಹಂತೇಶ್ ಕವಟಗಿಮಠ, ಶಾಸಕರಾದ ಶಶಿಕಲಾ ಜೊಲ್ಲೆ, ಪಿ ರಾಜೀವ್, ದುರ್ಯೋಧನ ಐಹೊಳೆ, ಮಾಜಿ ಸಚಿವ ಲಕ್ಷ್ಮಣ ಸವದಿ, ಮಾಜಿ ಶಾಸಕ ರಾಜು ಕಾಗೆ, ಸಿದ್ದು ಸವದಿ ಮತ್ತು ಅಣ್ಣಾಸಾಹೇಬ್ ಜೊಳ್ಳೆ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ ಬಳಿಕ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಕವಟಗಿಮಠ, ರಾಜ್ಯದಲ್ಲಿ ನೀರಿನ ಬರಗಾಲದಿಂದ ರೈತರಿಗೆ ಆಗುವ ಸಂಕಷ್ಟದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನದಟ್ಟು ಮಾಡಿದೆವು. ನೀರನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಅದೇ ರೀತಿ ಕರ್ನಾಟಕದ ಅಣೆಕಟ್ಟುಗಳಿಂದ ಮಹಾರಾಷ್ಟ್ರದ ಜಾಟ್ ಸಮುದಾಯದವರ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡುವಂತೆ ಕೂಡ ಹೇಳಿದ್ದಾರೆ. ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಹೇಳಿದ್ದು ಅಲ್ಲದೆ ಎರಡೂ ರಾಜ್ಯಗಳ ನಡುವಿನ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಸಹಿ ಮಾಡಿರುವುದನ್ನು ಜಾರಿಗೆ ತರುವ ಬಗ್ಗೆ ಕೂಡ ಅವರು ಒಲವು ತೋರಿಸಿದ್ದಾರೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos