ಸುಮಲತಾ ಅಂಬರೀಷ್ - ಬಸವಾನಂದಸ್ವಾಮಿ
ಬೀದರ್: ಈ ಬಾರಿ ದೇಶದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಬೆಟ್ಟಿಂಗ್ ಹಾಗೂ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸ್ವಾಮೀಜಿಯೊಬ್ಬರು ಮಾತೃಹೃದಯಿ ಗುಣಗಳನ್ನು ಹೊಂದಿರುವ ಸುಮಲತಾ ಅಂಬರೀಷ್ ಅವರು ಜಯ ಸಾಧಿಸುವುದರ ಜತೆಗೆ ಕೇಂದ್ರ ಸಚಿವರಾಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ ಗೆಲುವು ಸಾಧಿಸಲಿದ್ದಾರೆ ಎಂದು ಬಸವಕಲ್ಯಾಣದ ಬಸವಧರ್ಮದ ಪ್ರಸಾರಕ ಬಸವಾನಂದಸ್ವಾಮಿ ವಿಭೂತಿಮಠ ಅವರು ಹೇಳಿದ್ದಾರೆ.
ಪ್ರಬುದ್ಧ ಹಾಗೂ ಮೃದು ಮಾತಿನಿಂದ ಎಲ್ಲ ಸಮುದಾಯದವರ ಹೃದಯ ಗೆದ್ದಿರುವ ಸುಮಲತಾಗೆ ಉತ್ತಮ ರಾಜಕೀಯ ಭವಿಷ್ಯ ಇದೆ. ಈಗಾಗಲೇ ಸುಮಲತಾ ಅವರು ತಮ್ಮ ನಡೆ-ನುಡಿಗಳಿಂದ ಮಂಡ್ಯ ಜನರ ಮನಸ್ಸನ್ನು ಗೆದ್ದಿದ್ದಾರೆ, ಮಾತ್ರವಲ್ಲದೇ ಈ ಬಾರಿಯ ಚುನಾವಣೆಯಲ್ಲೂ ಗೆಲುವು ಅವರದ್ದೇ ಆಗಲಿದೆ ಎಂದು ಬಸವಾನಂದ ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗುತ್ತಾರೆ ಮತ್ತು ಮೋದಿ ಸಂಪುಟದಲ್ಲಿ ಸುಮಲತಾ ಅವರು ಕೇಂದ್ರ ಸಚಿವೆ ಆಗಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಬಸವಾನಂದ ಸ್ವಾಮಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics