ರಾಜ್ಯ

ಚಿನ್ನ ಖರೀದಿಸಲು ಹೋಗುವ ಗ್ರಾಹಕರೇ ಎಚ್ಚರ, ನಗ-ನಾಣ್ಯ ದೋಚುವ ಖದೀಮರಿರುತ್ತಾರೆ ಹುಷಾರ್!

Sumana Upadhyaya
ಬೆಂಗಳೂರು: ಅಕ್ಷಯ ತೃತೀಯ ದಿನವಾದ ಮಂಗಳವಾರ ಬೆಂಗಳೂರಿನ ಸಾವಿರಾರು ಮಂದಿ ಚಿನ್ನದ ಮಳಿಗೆಗೆ ಚಿನ್ನ ಖರೀದಿಸಲು ಹೋಗುತ್ತಾರೆ. ಸಹಜವಾಗಿಯೇ ಮಳಿಗೆಯಲ್ಲಿ ಜನಜಂಗುಳಿಯಿದೆ. ಈ ಮಧ್ಯೆ ಚಿನ್ನ, ಹಣ ಎಗರಿಸಲು ಹೊಂಚುಹಾಕುವವರು ಇರುತ್ತಾರೆ. ಇಂಥವರ ಮೇಲೆ ಹದ್ದಿನ ಕಣ್ಣಿರಿಸಲು ನಗರ ಪೊಲೀಸರು ಮುಂದಾಗಿದ್ದಾರೆ.
ಅಕ್ಷಯ ತೃತೀಯ ದಿನ ಚಿನ್ನದ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರ ಜೊತೆ ಜಾಗ್ರತೆಯಿಂದ ವರ್ತಿಸಿ, ಹಾಗೆಯೇ ಗ್ರಾಹಕರು ಕೂಡ ತಮ್ಮ ಚಿನ್ನ, ಬೆಳ್ಳಿ, ಹಣ ಮತ್ತು ಅಮೂಲ್ಯ ವಸ್ತುಗಳನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಗ್ರಾಹಕರ ಸೋಗಿನಲ್ಲಿ ಬಂದು ಖದೀಮರು ಚಿನ್ನ ಮತ್ತು ಹಣ ಎಗರಿಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್, ಜ್ಯುವೆಲ್ಲರಿ ಮಳಿಗೆಗಳ ಸುತ್ತಮುತ್ತ ಭದ್ರತೆ ಹೆಚ್ಚಿಸುವಂತೆ, ಸಿಸಿಟಿವಿ ಕ್ಯಾಮರಾ ಸರಿಯಾಗಿ ಕಾರ್ಯನಿರ್ವಹಿಸುವಂತೆ ನಗರದ ಎಲ್ಲಾ ವಲಯಗಳ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜ್ಯುವೆಲ್ಲರಿ ಮಳಿಗೆಗಳ ಸುತ್ತಮುತ್ತ ಹೊಯ್ಸಳ ವಾಹನಗಳ ಓಡಾಟ ಹೆಚ್ಚಿಸಲು ಮತ್ತು ಯಾರಾದರೂ ಶಂಕಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ಹಿಡಿದು ವಿಚಾರಿಸುವಂತೆ ಬೀಟ್ ಪೊಲೀಸರಿಗೆ ಸೂಚಿಸಲಾಗಿದೆ.ಜ್ಯುವೆಲ್ಲರಿ ಮಾಲೀಕರಿಗೆ ಸಹ ಸಂಶಯಾಸ್ಪದ ವ್ಯಕ್ತಿಗಳು ಮಳಿಗೆಗಳ ಒಳಗೆ ಸುತ್ತಾಡುತ್ತಿರುವುದು ಕಂಡುಬಂದರೆ ತಕ್ಷಣವೇ ತಿಳಿಸಬೇಕೆಂದು ಹೇಳಿದ್ದಾರೆ.
ಈ ಮಧ್ಯೆ ಜ್ಯುವೆಲ್ಲರಿ ಮಳಿಗೆಗಳ ಬಾಗಿಲಿನಲ್ಲಿ ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ಇದ್ದು ಜನರನ್ನು ತಪಾಸಣೆ ಮಾಡುತ್ತಿರಬೇಕು. ಚಿನ್ನ, ಬೆಳ್ಳಿ ಖರೀದಿಸಿದ ನಂತರ ಗ್ರಾಹಕರು ಮನೆಗಳಿಗೆ ತಲುಪುವವರೆಗೆ ಎಚ್ಚರವಾಗಿರಬೇಕು, ಯಾವುದೇ ಕ್ಷಣದಲ್ಲಿಯೂ ನಿಮ್ಮನ್ನು ಯಾಮಾರಿಸುವವರು ಇರುತ್ತಾರೆ ಎನ್ನುತ್ತಾರೆ ಸುನಿಲ್ ಕುಮಾರ್.
SCROLL FOR NEXT