ರಾಜ್ಯ

ಮಂಡ್ಯ, ಮೈಸೂರು ಜಿಲ್ಲೆಗಳ ರೈತರಿಗೆ ಸಾಲಮನ್ನಾ ಚಿಂತೆ

Sumana Upadhyaya
ಮೈಸೂರು: ಮಂಡ್ಯ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಅದಕ್ಕೆ ಕಾರಣ ಪೂರ್ವ ಮುಂಗಾರು ಕೊರತೆ. ಆದರೆ ಜಿಲ್ಲೆಯ ಗ್ರಾಮಸ್ಥರು ಲೋಕಸಭೆ ಚುನಾವಣೆಯ ಬೆಟ್ಟಿಂಗ್ ದಂಧೆಯಲ್ಲಿ ಮಗ್ನರಾಗಿದ್ದಾರೆ.
ಈ ಚರ್ಚೆ, ಮಾತುಕತೆ ತುಮಕೂರಿನವರೆಗೆ ಹೋಗಿ ಜೆಡಿಎಸ್ ವರಿಷ್ಠ ದೇವೇಗೌಡರ ಭವಿಷ್ಯದ ಬಗ್ಗೆಯೂ ನಡೆಯುತ್ತಿದೆ.
ಏಳು ಜನ ಜೆಡಿಎಸ್ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರನ್ನು ಹೊಂದಿರುವ ಮಂಡ್ಯ ಜನತೆಯ ತೀರ್ಪು ರಾಜ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ಕೂಡ ನಿರ್ಧರಿಸುತ್ತದೆ. ಇಲ್ಲಿನ ಹಲವು ರೈತರ ಸಾಲ ಇನ್ನೂ ಮನ್ನಾ ಆಗಿಲ್ಲ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜಿಲ್ಲೆಯ ಗ್ರಾಮಗಳ ಕೆಲವು ರೈತರ ಬಳಿ ಹೋಗಿ ಮಾತನಾಡಿಸಿದಾಗ ಅವರ ಮನದಾಳದಲ್ಲಿನ ಬಯಕೆಗಳು ತಿಳಿದುಬಂದವು. ರೈತರ ಸಾಲಮನ್ನಾ ಸಂಪೂರ್ಣವಾಗುವವರೆಗೆ ಮತ್ತು ಹೊಸ ಸಕ್ಕರೆ ಕಾರ್ಖಾನೆ ಯೋಜನೆ ಆರಂಭವಾಗುವವರೆಗೆ ಈ ಸರ್ಕಾರ ಉಳಿಯಬೇಕೆಂಬುದು ನಮ್ಮ ಆಸೆ ಎನ್ನುತ್ತಾರೆ ಯಲಿಯೂರಿನ ರೈತ ಮಾದೇ ಗೌಡ.
ಯಾವುದೇ ಸರ್ಕಾರ ಬಂದರೂ ರೈತರ ಸಾಲಮನ್ನಾ ಆಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಮತ್ತೊಬ್ಬ ರೈತ ಕುಂಟನಹಳ್ಳಿಯ ಶಿವಣ್ಣ. ಬಿಜೆಪಿ ಆಡಳಿತವಿರುವ ಸರ್ಕಾರಗಳಲ್ಲಿ ಸಹ ರೈತರ ಸಾಲಮನ್ನಾ ಆಗಿದೆ. ಬಿಜೆಪಿ ರಾಜ್ಯದಲ್ಲಿ ಬಂದರೆ ರೈತರ ಸಾಲಮನ್ನಾ ಆಗುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಅವರು.
SCROLL FOR NEXT