ರಾಜ್ಯ

ನಾಳೆ ರೆಬೆಲ್ ಸ್ಟಾರ್ ಜನ್ಮದಿನ, ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ

Nagaraja AB

ಬೆಂಗಳೂರು: ಸಕ್ಕರೆ ನಾಡು  ಮಂಡ್ಯದಲ್ಲಿ ನಾಳೆ ಹಬ್ಬವೋ ಹಬ್ಬ. ರೆಬೆಲೆ ಸ್ಟಾರ್  ಅಂಬಿ ಜನ್ಮದಿನದ ಜೊತೆಗೆ, ‘ಸ್ವಾಭಿಮಾನಿ ವಿಜಯೋತ್ಸವ’ ದ ಮೂಲಕ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಸುಮಲತಾ ಅಂಬರೀಶ್ ಮುಂದಾಗಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಕಾಂಗ್ರೆಸ್ ಹಾಗೂ ಬಿಜೆಪಿ ಹಿರಿಯ ಮುಖಂಡರುಗಳನ್ನು ಭೇಟಿಯಾಗಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿರುವ ಸುಮಲತಾ ಅಂಬರೀಶ್, ಮಂಡ್ಯ ಜನತೆಗೆ ಮಾತ್ರ ವಿಶೇಷ ರೀತಿಯಲ್ಲಿ ಕೃತಜ್ಞತೆ ಅರ್ಪಿಸುವ ಸಲುವಾಗಿ ಅಂಬರೀಶ್  ಜಯಂತ್ಯುತ್ಸವದ ಜೊತೆಗೆ ಸ್ವಾಭಿಮಾನಿ ವಿಜಯೋತ್ಸವವನ್ನೂ ಆಯೋಜಿಸಿದ್ದಾರೆ.

“ಅಧಿಕಾರ, ಹಣ, ಪಕ್ಷ ಯಾವುದೂ ಇಲ್ಲದೆ, ಮಂಡ್ಯದ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಹೆಜ್ಜೆ ಹಾಕಿದೆ. ಮಂಡ್ಯದ ಜನತೆಯೂ ಸಹ ಪಕ್ಷ ಬದಿಗೊತ್ತಿ, ನನ್ನೊಂದಿಗೆ ಹೆಜ್ಜೆ ಹಾಕಿ ಅಭೂತಪೂರ್ವ ಜಯ ದೊರಕಿಸಿಕೊಟ್ಟಿದ್ದಾರೆ. ಆ ಜನತೆಗೆ ಕೃತಜ್ಞತೆ ಹೇಳುವ ದಿನ. ಮಂಡ್ಯದ ಜನತೆಗೆ ಪ್ರೀತಿಯ ಆಹ್ವಾನ” ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.

ಸುಮಲತಾ ಅಂಬರೀಶ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ತಮ್ಮ ಸಮೀಪದ ಪ್ರತಿಸ್ಪರ್ಧಿ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸಿದ್ದಾರೆ. ಈ ಮೂಲಕ ಸಂಸತ್ ಭವನದ ಮೆಟ್ಟಿಲೇರುತ್ತಿರುವ ರಾಜ್ಯದ ಮೊಟ್ಟ ಮೊದಲ ಪಕ್ಷೇತರ ಮಹಿಳಾ ಸಂಸದೆ ಎನಿಸಿದ್ದಾರೆ.
SCROLL FOR NEXT