ರಾಜ್ಯ

ವಿಧಾನಸಭಾ ಉಪಚುನಾವಣೆ: ನಾಳೆಯಿಂದಲೇ ನೀತಿ ಸಂಹಿತೆ ಜಾರಿ

Raghavendra Adiga

ಬೆಂಗಳೂರು: ಶಾಸಕರ ಅನರ್ಹತೆ ಕಾರಣ ತೆರವಾಗಿದ್ದ 15 ವಿಧಾನಸಭಾ ಕ್ಷೇತ್ರಗಳಿಗೆ ಬರುವ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದ್ದು ಇದಕ್ಕಾಗಿ ನಾಳೆ ಅಧಿಸೂಚನೆ ಹೊರಬೀಳಲಿದೆ. ಜತೆಗೆ ನಾಳೆಯಿಂದಲೇ ನೀತಿ ಸಂಹಿತೆ ಸಹ ಜಾರಿಗೆ ಬರಲಿದೆ.

ಉಪಚುನಾವಣೆಗೆ ಇದಾಗಲೇ ಚುನಾವಣಾ ಆಯೋಗ ಸರ್ವ ಸಿದ್ದತೆಯನ್ನು ಮಾಡಿಕೊಂಡಿದ್ದು ಈ ಕುರಿತ ವಿವರಗಳನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಭಾನುವಾರ ಮಾದ್ಯಮಗಳಿಗೆ ತಿಳಿಸಿದ್ದಾರೆ.

15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಸೋಮವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಆದರೆ ಇಡೀ ಜಿಲ್ಲೆಗೆ ಬದಲಾಗಿ ಚುನಾವಣೆ ನಡೆಯಲಿರುವ ಕ್ಷೇತ್ರಕ್ಕೆ ಮಾತ್ರವೇ ನೀತಿ ಸಂಹಿತೆ ಅನ್ವಯಿಸಲಿದೆ. "ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿ ಮಾಡಿದರೆ ಅಭಿವೃದ್ದಿ ಕಾರ್ಯಗಳಿಗೆ ಅಡಚಣೆಯಾಗುವ ಕಾರಣ ಈ ಮಾರ್ಪಾಡು ಮಾಡಲಾಗಿದೆ" ಸಂಜೀವ್ ಕುಮಾರ್ ಹೇಳಿದ್ದಾರೆ

"ಈ ಬಾರಿ ಎಂ-3 ಮಾದರಿಯ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ. ಇದಕ್ಕೆ ಮುನ್ನ 2018ರಲ್ಲಿ ಬೆಂಗಳೂರು ಸೆಂಟ್ರಲ್ ನಲ್ಲಿ ಇಂತಹಾ ಮತಯಂತ್ರಗಳನ್ನು ಬಳಸಲಾಗಿದ್ದು ಇವು ಸುಧಾರಿತ ಯಂತ್ರಗಳಾಗಿದೆ" ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣೆಬೆನ್ನೂರು, ಬಳ್ಳಾರಿ ಜಿಲ್ಲೆಯ ವಿಜಯನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ, ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿದ್ದು ಇದಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಿದೆ. ನವೆಂಬರ್ 18ಕ್ಕೆ ನಾಮಪತ್ರ ಸಲ್ಲಿಕೆ ಕೊನೆಗೊಳ್ಳಲಿದ್ದು ನವೆಂಬರ್ 19ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಬವೆಂಬರ್ 21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದು ಡಿ.5ರಂದು ಮತದಾನ ನಡೆದು, ಡಿ.11ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT