ರಾಜ್ಯ

ನಿರ್ಮಾಣ ತ್ಯಾಜ್ಯ ಬಳಕೆಗೆ ಶೀಘ್ರದಲ್ಲೇ ಹೊಸ ನಿಯಮ ಜಾರಿ

Manjula VN

ಬೆಂಗಳೂರು: ನಗರ ಪ್ರದೇಶಗಳಲ್ಲಿ ಹಳೆಯ ಕಟ್ಟಡಗಳನ್ನು ಕೆಡವುದು ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ತ್ಯಾಜ್ಯ ಉಂಟಾಗುತ್ತಿದ್ದು, ಇವುಗಳನ್ನು ಎಲ್ಲಿ ಹಾಗೂ ಹೇಗೆ ನಿರ್ವಹಣೆ ಮಾಡುವುದು ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಸಮಸ್ಯೆಯನ್ನು ದೂರಾಗಿಸಲು ಬಿಬಿಎಂಪಿ ಹೊಸ ನಿಯಮ ಜಾರಿಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 

ಕಟ್ಟಡ ನಿರ್ಮಾಣದ ವೇಳೆ ಉಂಟಾಗುವ ತ್ಯಾಜ್ಯಗಳ ಪೈಕಿ ಶೇ.20ರಷ್ಟು ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳುವಂತೆ ಹೊಸ ನಿಯಮ ಜಾರಿಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ಈ ನಿಯಮವನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾಲನೆ ಮಾಡಲಾಗುತ್ತಿದ್ದು, ಇದೇ ನಿಯಮವನ್ನು ಬೆಂಗಳೂರಿನಲ್ಲಿಯೂ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. 

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಣದೀಪ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹೊಸ ನಿಯಮ ಜಾರಿಗೆ ಬಿಬಿಎಂಪಿ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದ್ದಾರೆ. 

ಈಗಾಗಲೇ ಬಿಬಿಎಂಪಿ ಆಯುಕ್ತ ಬಿಹೆಚ್. ಅನಿಲ್ ಕುಮಾರ್ ಅವರು ದೆಹಲಿಗೆ ಭೇಟಿ ನೀಡಿದ ಅಲ್ಲಿನ ನಿಯಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಪರಿಶೀಲನೆ ಬಳಿಕ ಉತ್ತಮ ವಿಧಾನವೆಂದು ಹೇಳಿದ್ದಾರೆ. 

ಉಪ ಮುಖ್ಯಮಂತ್ರಿ ಸಿಎನ್ ಅಶ್ವತ್ಥ್ ನಾರಾಯಣ್ ಮಾತನಾಡಿ, ಈ ಸವಾಲನ್ನು ಎದುರಿಸಲು ಸರ್ಕಾರ ಸಾಕಷ್ಟು ಶ್ರಮಪಡುತ್ತಿದೆ. ಸ್ವಚ್ಛತೆ ಪ್ರಮುಖ ವಿಚಾರವಾಗಿದೆ. ನಿರ್ಮಾಣ ತ್ಯಾಜ್ಯ ಹಾಗೂ ಕಸ ನಿರ್ವಹಣೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಚ್ಛತೆ ಕಾಪಾಡಲು ಹೊಸ ತಂತ್ರಜ್ಞಾನಗಳನ್ನು ತರಲಾಗುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT