ರಾಜ್ಯ

ಗುತ್ತಿಗೆ ಅವಧಿ ಮುಗಿದಿರುವ ಟರ್ಫ್ ಕ್ಲಬ್ ಚಟುವಟಿಕೆ ಡಿ. 2 ರಿಂದ ಸ್ಥಗಿತಗೊಳ್ಳಬೇಕು: ಎಚ್.ಕೆ. ಪಾಟೀಲ್

Nagaraja AB

ಬೆಂಗಳೂರು: ಡಿಸೆಂಬರ್ 2 ರಿಂದ ಜಾರಿಗೆ ಬರುವಂತೆ ಬೆಂಗಳೂರು ಟರ್ಫ್ ಕ್ಲಬ್ ನ ಎಲ್ಲಾ ರೇಸಿಂಗ್ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಸೂಚಿಸಿದ್ದಾರೆ.ಈ ಸಂಬಂಧ ಅವರು ಅಪರಮುಖ್ಯ ಕಾರ್ಯದರ್ಶಿ ಅವರಿಗೆ ನಿರ್ದೇಶನ ಕೊಟ್ಟಿದ್ದು, ಈ ಸಂಬಂಧ ಪ್ರಕ್ರಿಯೆ ಆರಂಭಿಸುವಂತೆ ಆದೇಶಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟರ್ಫ್ ಕ್ಲಬ್ ಗುತ್ತಿಗೆ ಅವಧಿ ೧೯೮೯ರಲ್ಲೇ ಮುಕ್ತಾಯಗೊಂಡಿದ್ದು, ಸದರಿ ಜಮೀನನ್ನು ಸರ್ಕಾರದ ವಶಕ್ಕೆ ನೀಡುವಂತೆ ಆದೇಶ ಮಾಡಿದ್ದರೂ ಟರ್ಫ್ ಕ್ಲಬ್ ಸರ್ಕಾರದ ಆದೇಶವನ್ನು ಪಾಲನೆ ಮಾಡಿಲ್ಲ. ಮೇಲಾಗಿ ಸರ್ಕಾರಕ್ಕೆ ನೀಡಬೇಕಾಗಿರುವ ೩೨ ಕೋಟಿ ರೂಪಾಯಿ ಬಾಡಿಗೆ ಹಣ ವಸೂಲು ಮಾಡಲು ಕೂಡಲೇ ನೋಟೀಸ್ ಜಾರಿ ಮಾಡುವಂತೆಯೂ ಸಮಿತಿ ಸೂಚನೆ ಕೊಟ್ಟಿದೆ ಎಂದರು.

ಸುಪ್ರೀಂ ಕೋರ್ಟ್ ನಲ್ಲಿ ಈ ಸಂಬಂಧ ಬಾಕಿ ಇರುವ ಮೊಕದ್ದಮೆಯನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ಸಮಿತಿ ಆದೇಶ ನೀಡಿದೆ ಎಂದು ಎಚ್.ಕೆ.ಪಾಟೀಲ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

SCROLL FOR NEXT