ರಾಜ್ಯ

ಬೆಳಗಾವಿ: ಪ್ರವಾಹ ತಂದ ಸಂಕಷ್ಟದಿಂದ ರೈತ ಆತ್ಮಹತ್ಯೆ

Lingaraj Badiger

ಬೆಳಗಾವಿ: ಭೀಕರ ಪ್ರವಾಹದಿಂದಾಗಿ ನೀರಿನಲ್ಲಿ ಬೆಳೆ ಕೊಚ್ಚಿ ಹೋಗಿದ್ದರಿಂದ ಮನ ನೊಂದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
  
ಅಂಬೇವಾಡಿ ಗ್ರಾಮದ 60 ವರ್ಷದ ಮಾರುತಿ ನಾರಾಯಣ ರಾಕ್ಷೆ ಎಂಬುವವರು ವಿಷ ಸೇವಿಸಿ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇವರು ಹೊಲದಲ್ಲಿ ಭತ್ತ ಹಾಗೂ ಆಲೂಗಡ್ಡೆ ಬೆಳೆದಿದ್ದರು. ಕಳೆದೆರಡು ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಮಲಪ್ರಭೆ ನದಿಯಲ್ಲಿ ನೆರೆ ಬಂದಿತ್ತು. ಹೀಗಾಗಿ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಅಲ್ಲದೇ, ಸರ್ಕಾರದಿಂದ ಬೆಳೆ ಪರಿಹಾರವೂ ದೊರಕದಿರುವುದರಿಂದ ಮನನೊಂದು  ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.  

ರೈತ ಮಾರುತಿ ಸೋಮವಾರ ವಿಷ ಸೇವಿಸಿದ್ದರು. ಕೂಡಲೇ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT