ರಾಜ್ಯ

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಹೆಸರಲ್ಲಿ ಬೆದರಿಕೆ: ರೌಡಿ ಶೀಟರ್ ಅರೆಸ್ಟ್

Shilpa D

ಬೆಂಗಳೂರು: ಜಯ ಕರ್ನಾಟಕದ ಮುಖ್ಯಸ್ಥ ಮುತ್ತಪ್ಪ ರೈ ಹೆಸರಲ್ಲಿ ಕಿಡ್ನಾಪ್ ಮಾಡಿದ್ದ ಖತರ್ನಾಕ್ ರೌಡಿಶೀಟರ್ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಹುಳಿಮಾವು ನಿವಾಸಿ ಮುನಿಯಪ್ಪನವರನ್ನು ಕಿಡ್ನಾಪ್ ಮಾಡಿದ್ದ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಪ್ಟನ್ ರಾಜ ಪೊಲೀಸರಿಗೆ ಹೆದರಿ ಕೋರ್ಟಿಗೆ ಶರಣಾಗಿದ್ದಾನೆ. ಈತ ಜೂನ್ 19 ರಂದು ಮುನಿಯಪ್ಪನವರನ್ನು ಕಿಡ್ನಾಪ್ ಮಾಡಿ 6 ಕೋಟಿ ರೂ. ಬೇಡಿಕೆ ಇಟ್ಟಿದ್ದ.

ಈ ಕಿಡ್ನಾಪ್‍ಗೆ ಮುನಿಯಪ್ಪನವರ ಆಪ್ತ ಸ್ನೇಹಿತ ಗೋಪಾಲ ಸಾಥ್ ನೀಡಿದ್ದು, ಸಿನಿಮಾ ಶೈಲಿಯಲ್ಲಿ ಸ್ಕೆಚ್ ರೆಡಿ ಮಾಡಿ ಕಿಡ್ನಾಪ್ ಮಾಡಿಸಿದ್ದ. ಗೋಪಾಲ ಹೇಳಿದ್ದಂತೆ ಮುನಿಯಪ್ಪನನ್ನು ಕಿಡ್ನಾಪ್ ಮಾಡಿದ್ದ ರಾಜ ಒಂದು ದಿನ ಮೈಸೂರಿನಲ್ಲಿ ಅವರನ್ನು ಲಾಕ್ ಮಾಡಿ ಇಟ್ಟುಕೊಂಡಿದ್ದ. ಈ ವಿಚಾರ ಹೊರಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ರಾಜ, ಒಂದು ದಿನದ ನಂತರ ಮೈಸೂರು ರಸ್ತೆಯಲ್ಲಿ ಮುನಿಯಪ್ಪನನವರನ್ನು ಬಿಟ್ಟು ಕಳುಹಿಸಿದ್ದ.

ಈ ವೇಳೆ ಪ್ಲಾನ್‍ನಂತೆ ಮೈಸೂರು ರಸ್ತೆಯಲ್ಲಿ ಕಾದು ಕುಳಿತಿದ್ದ ಗೋಪಾಲ, ಅಣ್ಣ ನಿನ್ನನ್ನು ಬಿಡುಗಡೆ ಮಾಡಿಸಲು ರೌಡಿಗಳಿಗೆ 5 ಕೋಟಿ ನೀಡಿದ್ದೇನೆ ಎಂದು ಮುನಿಯಪ್ಪಗೆ ಹೇಳಿ ನಂಬಿಸಿದ್ದ. ನಂತರ ಆ ಹಣವನ್ನು ಪಡೆಯಲು ಮುನಿಯಪ್ಪನವರ ಜಮೀನು ಮಾರಿಸಿದ್ದ ಗೋಪಾಲ ನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ.

ಗೋಪಾಲ ಹೆಚ್ಚಿಗೆ ಹಣ ಕೇಳಿದಾಗ ಅನುಮಾನಗೊಂಡ ಮುನಿಯಪ್ಪನವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ವಿಚಾರಣೆ ಮಾಡಿದಾಗ ಗೋಪಾಲನ ಅಸಲಿ ಬಣ್ಣ ಬಯಲಾಗಿದೆ. ಇದರ ಜೊತೆಗೆ ಸಹಾಯ ಮಾಡಿದ್ದ ಕಿಡ್ನಾಪರ್ ರಾಜನಿಗೂ ಮೋಸ ಮಾಡಿದ್ದ ಗೋಪಾಲ ರಾಜನ ಬಳಿ ನಾಲ್ಕು ಕೋಟಿ ಡೀಲ್ ಎಂದು ಹೇಳಿ ಮುನಿಯಪ್ಪನಿಂದ ಆರು ಕೋಟಿ ಕಿತ್ತಿದ್ದ. ಅದಲ್ಲದೇ ರಾಜಗೆ ಒಂದು ರೂಪಾಯಿ ಕೊಡದೆ ಗೇಮ್ ಆಡಿದ್ದ ಎನ್ನಲಾಗಿದೆ.

ಘಟನೆ ನಂತರ ತಲೆ ಮರೆಸಿಕೊಂಡಿದ್ದ ರಾಜ ಪೊಲೀಸರಿಗೆ ಹೆದರಿ ಭಾನುವಾರ ಬಂದು ಕೋರ್ಟಿಗೆ ಶರಣಾಗಿದ್ದಾನೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆಗಾಲೇ ಎರಡು ಕೋಟಿಯನ್ನು ಗೋಪಾಲನಿಂದ ವಶ ಪಡಿಸಿಕೊಂಡಿದ್ದಾರೆ.

SCROLL FOR NEXT