ರಾಜ್ಯ

ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಅವಾಂತರ.! ಕೈಗೆ ಬಂದ ಬೆಳೆ ಕಳೆದುಕೊಳ್ಳುವ ಭೀತಿ ರೈತರಿಗೆ!

Vishwanath S

ಹೊಸಪೇಟೆ: ಮಳಿ ಇಷ್ಟು ದಿನ ಹೋಗಿ ಕೆಡಿಸಿತು, ಈಗ ಬಂದು ಕೆಡಸಕತ್ತೇತಿ ಯಾರಿಗೇಳಬೇಕು ನಮ್ಮ ಕರ್ಮ.

ಹೌದು ರೈತರ ಬಾಯಿಯಲ್ಲಿ ಇಂತದ್ದೊಂದು ಆತಂಕದ ನುಡಿ ಕೇಳಿ ಬರುವುದಕ್ಕೆ ಕಾರಣ  ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ, ಹೊಸಪೇಟೆ, ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಅದರಲ್ಲೂ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಾದ್ಯಂತ ಸುರಿದ ಮಳೆ ರೈತರಲ್ಲಿ ನಡುಕ ಹುಟ್ಟಿಸಿದೆ. ಕಾರಣ ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಆಗಿದ್ದರೂ ಅದೇ ಮಳೆಗೆ ಬಿತ್ತನೆ ಮಾಡಿದ್ದ ಬೆಳೆಗಳು ಇದೀಗ ಕಟಾವು ಹಂತಕ್ಕೆ ಬಂದು ತಲುಪಿವೆ, 

ಅದರಲ್ಲೂ ಶೇಂಗ ಬೆಳೆ ಕಟಾವು ಮಾಡಲಾಗಿದೆ ಕೂಡ, ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನ ಕಟಾವು ಮಾಡಿ ಮನೆಗಳಿಗೆ ಕಣಗಳಿಗೆ ಬೆಳೆಗಳನ್ನ ತಂದಿರುವ ರೈತರು, ಅವುಗಳನ್ನ ಒಣಗಿಸಿ ಮಾರುಕಟ್ಟೆಗೆ ಸಾಗಾಟ ಮಾಡಲು ಸಹ ಮಳೆ ಬಿಡುವು ಕೊಡುತ್ತಿಲ್ಲ.

ಸಹಜವಾಗಿ ಮುಂಗಾರಿನಲ್ಲಿ ಹೂವಿನಹಡಗಲಿ ತಾಲೂಕಿನಾದ್ಯಂತ ಶೇಂಗಾ, ಮೆಕ್ಕೆಜೋಳ, ಸಜ್ಜೆ, ಹತ್ತಿ ಸೇರಿದಂತೆ ಇತರೆ ಬೆಳೆಗಳನ್ನ ಬಿತ್ತನೆ ಮಾಡಲಾಗಿತ್ತು, ಈಗ ಅಬ್ಬರಿಸುತ್ತಿರುವ ಮಳೆ ಮುಂಗಾರಿನಲ್ಲಿ ಕೈ ಕೊಟ್ಟು ಕೆಲವು ಬೆಳೆಗಳು ಒಣಗಿ ಹೋಗಿದ್ದವು ಕೂಡ, ಅದರಲ್ಲೂ ಅಳಿದುಳಿದ ಕೆಲವು ಬೆಳೆಗಳು ಈಗ ರೈತರ ಕೈ ಸೇರುವ ಹಂತ ತಲುಪಿವೆ, ಇದೀಗ ಆ ಬೆಳೆಗಳನ್ನ ಕೂಡ ಮಳೆರಾಯ ಕೆಡಿಸಲು ಮುಂದಾಗಿದ್ದಾನೆ, ಈಗ ಸುರಿಯುತ್ತಿರುವ ಮಳೆ ಇನ್ನೂ ಒಂದು ವಾರಗಳ ಕಾಲ ಸುರಿದರೆ, ರೈತರ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಜಮೀನಲ್ಲೇ ಫಲ ಒಡೆದು ನಿಲ್ಲುವ ಪರಿಸ್ಥಿತಿ ಎದುರಾಗುತ್ತೆ ಎಂದು ರೈತರು ಗೋಗರೆಯುತ್ತಿದ್ದಾರೆ.

ಮಳೆ ಬಿಡುವಿನ ವೇಳೆಯಲ್ಲಿ ಜಮೀನಿನಿಂದ ಕಣಗಳಿಗೆ ಬೆಳೆಗಳನ್ನ ಸಾಗಿಸಿರುವ ರೈತರಿಗೆ ಕಣದಲ್ಲಿ ಆ ಬೆಳೆಯನ್ನ ಸ್ವಚ್ಚಮಾಡಲು ಆಗುತ್ತಿಲ್ಲ, ಅಷ್ಟೊಂದು ಮಳೆ ಸುರಿಯುತ್ತಿದೆ, ಹೂವಿನಹಡಗಲಿ ತಾಲೂಕಿನಲ್ಲಿ ಇರುವ ಪರಿಸ್ಥಿತಿಗಿಂತ ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ, ಕಂಪ್ಲಿ,ಹರಪನಹಳ್ಳಿ ತಾಲೂಕಿನಲ್ಲಿನ ಪರಿಸ್ಥಿತಿ ವಿಭಿನ್ನವಾಗಿಲ್ಲ, ಇದೇ ರೀತಿ ಪರಿಸ್ಥಿತಿ  ಮುಂದುವರೆದ್ರೆ ನಾವು ಬಿತ್ತನೆ ಮಾಡಿದ ಬೀಜ ಗೊಬ್ಬರ ಖರೀದಿಸಲು ಮಾಡಿದ ಸಾಲ ತೀರಿಸಲು ಸಹ ಆಗುವುದಿಲ್ಲ, ಸರ್ಕಾರ ಕೂಡಲೆ ಇತ್ತ ಗಮನ ಹರಿಸಿ, ನಮ್ಮ ಭಾಗದ ರೈತರ ಕಷ್ಟ ಪರಿಹಾರಕ್ಕೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

SCROLL FOR NEXT