ರಾಜ್ಯ

ಮಂಡ್ಯ; ಭಾರೀ ಮಳೆಗೆ ಗಂಜಿಗೆರೆ ಗ್ರಾಮದಲ್ಲಿ ಮನೆ ಕುಸಿತ: ಓರ್ವ ಸಾವು

Srinivasamurthy VN

ಕೆ.ಆರ್.ಪೇಟೆ: ತಾಲ್ಲೂಕಿನ ಗಂಜಿಗೆರೆ ಗ್ರಾಮದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಯುವಕನೊಬ್ಬ ಗೋಡೆಯ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಮುರುಕನಹಳ್ಳಿ ಗ್ರಾಮದ ನಂಜಯ್ಯ ಮತ್ತು ನರಸಮ್ಮ ದಂಪತಿಗಳ ಪುತ್ರ ಕುಮಾರ್ ಮೃತ ಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಕುಮಾರ್ ಅವರು ತಮ್ಮ ಅಜ್ಜಿ ಜವರಮ್ಮ ಅವರ ಮನೆಗೆ ಗಂಜಿಗೆರೆಗೆ ಹೋಗಿದ್ದಾಗ ಸೋಮವಾರ ರಾತ್ರಿ ಈ ದುರ್ಘಟನೆ ನಡದಿದೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಂ.ಶಿವಮೂರ್ತಿ, ರಾಜಸ್ವ ನಿರೀಕ್ಷಕ ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರುಕನಹಳ್ಳಿ ವಿಜಯಕುಮಾರ್ ಮತ್ತಿತರರು ಬೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಕುಮಾರ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಅಲ್ಲದೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಭಾರೀ ಮಳೆ, ನೂರಾರು ಎಕರೆ ಬೆಳೆ ನಾಶ, ಗ್ರಾಮಗಳ ಸಂಪರ್ಕ ಕಡಿತ, ಸೇತುವೆ ಮುಳುಗಡೆ: 
ಜಿಲ್ಲೆಯ ವಿವಿಧೆಡೆಗಳಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಮಂಡ್ಯ ಸಿಟಿ, ಕೆಆರ್ ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರು ಸೇರಿದಂತೆ ವಿವಿಧೆಡೆಗಳಲ್ಲಿ ರಾತ್ರಿಯಿಡೀ ಮಳೆಸುರಿದಿದೆ.

ರಾತ್ರಿಪೂರ ಸುರಿದ ಭಾರೀ ಮಳೆಯಿಂದಾಗಿ ಕೆಅರ್ ಪೇಟೆ ತಾಲ್ಲೂಕಿನ ರಾಯಸಮುದ್ರ ಬಳಿ ಸೂಜಿಗಲ್ಲು ಗುಡ್ಡ ಕೆರೆಯ ಏರಿ ಒಡೆದು ಸಾವಿರಾರು ಎಕರೆ ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಕೃಷಿ ಭೂಮಿ, ಕಬ್ಬಿನ ಗದ್ದೆ, ಭತ್ತ ಮತ್ತು ಬಾಳೆ ತೋಟಗಳು ಸಂಪೂರ್ಣ ನೆಲಕಚ್ಚಿದ್ದು ರೈತರಿಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಸಹ ಉರುಳಿಬಿದ್ದಿವೆ.

ಹಿರಳಹಳ್ಳಿ ಬಳಿ ಮುರುಕನಹಳ್ಳಿ ತೊರೆಯಲ್ಲಿ ಪ್ರವಾಹದಂತೆ ನೀರುಹರಿಯುತ್ತಿದ್ದು ತೊರೆ ಆಜುಬಾಜಿನ ಜನಜೀವನ ಅಸ್ತವ್ಯಸ್ತವಾಗಿದೆ, ಕೆ.ಆರ್.ಪೇಟೆ ಶೀಳನೆರೆ ಸಂಪರ್ಕ ರಸ್ತೆ ಕಡಿತಗೊಂಡಿದೆ.. ಹಿರಳಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ ತಾಲ್ಲೂಕು ಹೊಸಹೊಳಲು ಗ್ರಾಮದ ಎಸ್ ಎಲ್ ಎನ್ ಟೆಂಪಲ್ ರಸ್ತೆಯಲ್ಲಿ ಬರುವ ಪದ್ಮಮ್ಮ-ಶ್ರೀಕಂಠಚಾರಿ ಮನೆಯು ಮಳೆಗೆ ಬಹುತೇಕ ಕುಸಿದಿದೆ.. ಮಳೆಯಿಂದ ತೊಂದರೆಗೀಡಾಗಿರುವ ಕುಟುಂಬಸ್ಥರಿಗೆ ಎನ್ ಡಿ ಆರ್ ಎಫ್ ಯೋಜನೆಯಡಿಯಲ್ಲಿ ಪರಿಹಾರ ವಿತರಣೆ ಮಾಡುವಂತೆ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ  ತಹಸೀಲ್ದಾರ್ ಎಂ.ಶಿವಮೂರ್ತಿ, ರಾಜಸ್ವ ನಿರೀಕ್ಷಕ ಕೃಷ್ಣೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರುಕನಹಳ್ಳಿ ವಿಜಯಕುಮಾರ್ ಮತ್ತಿತರರು ಬೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಕುಮಾರ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ವರದಿ: ನಾಗಯ್ಯ

SCROLL FOR NEXT