ರಾಜ್ಯ

ಹುಬ್ಬಳ್ಳಿ: ನಿಂಬೆಹಣ್ಣಿನ ರೀತಿಯಲ್ಲಿದ್ದ ವಸ್ತು ಕಚ್ಚಾ ಬಾಂಬ್!

Manjula VN

ಬೆಂಗಳೂರು: ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿ, ಸ್ಫೋಟಗೊಂಡಿದ್ದ ನಿಂಬೆಹಣ್ಣಿನ ಆಕಾರದಲ್ಲಿದ್ದ ವಸ್ತು ಕಚ್ಚಾ ಬಾಂಬ್ ಆಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. 

ನಿಲ್ದಾಣದಲ್ಲಿ ಪತ್ತೆಯಾಗಿದ್ದ ನಿಂಬೆ ಆಕಾರದ ವಸ್ತುವು ಅಮೋನಿಯಂ ನೈಟ್ರೇಟ್, ಸಲ್ಫರ್ ಮತ್ತು ಇಂಗಾಲವನ್ನು ಒಳಗೊಂಡಿರುವ ಕಚ್ಚಾ ಬಾಂಬ್ ಆಗಿತ್ತು ವರದಿಗಳು ತಿಳಿಸಿವೆ. 

ಅಮೋನಿಯಂ ನೈಟ್ರೇಟ್ ನ್ನು ಸಾರಜನಕ ಗೊಬ್ಬರವಾಗಿ ಬಳಸಲಲಾಗುತ್ತದೆ ಮತ್ತು ಸ್ಫೋಟಕ ವಸ್ತುಗಳಿಗೂ ಬಳಕೆ ಮಾಡಲಾಗುತ್ತದೆ. ಸಲ್ಫರ್'ನ್ನು ಸ್ಫೋಟಕ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರ ಬಳಕೆಯನ್ನು ಗನಾ'ಪೌಡರ್'ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. 

ಸಾಮಾನ್ಯವಾಗಿ ಇಂತಹ ಸ್ಫೋಟಕಗಳನ್ನು ತಮ್ಮ ಕೃಷಿ ಭೂಮಿಯನ್ನು ರಕ್ಷಣೆ ಮಾಡುವ ಸಲುವಾಗಿ ರೈತರು ಬಳಕೆ ಮಾಡುತ್ತಾರೆ. ಆಕರ್ಷವಾಗಿರುವ ಇಂತಹ ವಸ್ತುಗಳನ್ನು ಪ್ರಾಣಿಗಳು ತಿನ್ನುತ್ತವೆ. ನಂತರ ಪ್ರಾಣಿಗಳ ಬಾಯಿಯ ಭಾಗದಲ್ಲಿ ಸ್ಫೋಟಗೊಳ್ಳುತ್ತದೆ. ಈ ಸ್ಫೋಟಕಗಳು ಸುಧಾರಿತ ಸ್ಫೋಟಕತ ಸಾಧನಗಳಾಗಿರುವುದಿಲ್ಲ. ಆದರೂ ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. 

ವಿಜಯವಾಡ-ಹುಬ್ಬಳ್ಳಿ ಅಮರಾವತಿ ಎಕ್ಸ್'ಪ್ರೆಸ್ ನಲ್ಲಿದ್ದ ಬಕೆಟ್ ವೊಂದರಲ್ಲಿ ಸ್ಫೋಟಕ ವಸ್ತುವೊಂದು ಪತ್ತೆಯಾಗಿತ್ತು. ಹುಬ್ಬಳ್ಳಿ ನಿಲ್ದಾಣಕ್ಕೆ ಬಂದ ರೈಲಿನಲ್ಲಿ ಈ ವಸ್ತು ಪತ್ತೆಯಾಗಿತ್ತು. ಸ್ಥಲಕ್ಕೆ ಬಂದ ರೈಲ್ವೇ ರಕ್ಷಣಾ ಪಡೆಯ ಅಧಿಕಾರಿಗಳು ರೈಲನ್ನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಟೀ ಮಾರಾಟ ಮಾಡುತ್ತಿದ್ದ ಹುಸೇನ್ ಸಾಬ್ ಎಂಬ ವ್ಯಕ್ತಿಯನ್ನು ಕರೆದಿರುವ ಅಧಿಕಾರಿ ಬಕೆಟ್ ತಗೆದು, ಅದರಲ್ಲಿರುವ ವಸ್ತು ಪರಿಶೀಲಿಸುವಂತೆ ತಿಳಿಸಿದ್ದರು. ನಿಂಬೆಹಣ್ಣಿನಂತಿದ್ದ ವಸ್ತುವನ್ನು ತೆಗೆದ ಹುಸೇನ್ ಅವರು ಪರಿಶೀಲಿಸಲು ಮುಂದಾಗಿದ್ದರು. ಈ ವೇಳೆ ವಸ್ತು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಈ ವೇಳೆ ರೈಲ್ವೇ ನಿಲ್ದಾಣದ ಅಧಿಕಾರಿ ಕೂಡ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯವಾಡ ಹಾಗೂ ಕೊಲ್ಲಾಪುರ ಪೊಲೀಸರ ತಂಡ ಕೂಡ ತನಿಖೆಗೆ ಸಹಾಯ ಮಾಡುತ್ತಿದ್ದು, ಕರ್ನಾಟಕ ಆಂತರಿಕ ಭದ್ರತಾಧಿಕಾರಿಗಳು, ಹುಬ್ಬಳ್ಳಿ ಪೊಲೀಸರು ಹಾಗೂ ಆರ್'ಪಿಎಫ್ ಅಧಿಕಾರಿಗಳು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. 

SCROLL FOR NEXT