ರಾಜ್ಯ

ಮದ್ಯ ಸೇವಿಸಿ ವೇಗವಾಗಿ ಗಾಡಿ ಓಡಿಸಿದ ಆಟೋ ಚಾಲಕ: ಪುಟ್ಟ ಮಕ್ಕಳನ್ನು ರಕ್ಷಿಸಿದ ಸಂಚಾರಿ ಪೊಲೀಸರು!

Sumana Upadhyaya

ಬೆಂಗಳೂರು: ಮದ್ಯಪಾನ ಮಾಡಿ ವೇಗವಾಗಿ ಆಟೋ ಓಡಿಸುತ್ತಿದ್ದ ಚಾಲಕನನ್ನು ಹಿಡಿದು ಇಬ್ಬರು ಪುಟ್ಟ ಶಾಲಾ ಮಕ್ಕಳನ್ನು ಮಡಿವಾಳ ಸಂಚಾರಿ ಪೊಲೀಸರು ಕಾಪಾಡಿದ್ದಾರೆ.


ಮಕ್ಕಳನ್ನು ರಕ್ಷಿಸಿ ಅವರ ಪೋಷಕರು ಬರುವವರೆಗೆ ಪೊಲೀಸರು ಅವರ ಜೊತೆ ಕಳೆಯುತ್ತಾ, ಕಥೆ, ಹಾಡು ಹೇಳುತ್ತಾ, ಮನರಂಜನೆ ಮಾಡುತ್ತಾ ಮಕ್ಕಳಿಗೆ ಚಾಕಲೇಟು ನೀಡಿ ಕಳುಹಿಸಿದ್ದಾರೆ. ಮಕ್ಕಳು ಯುಕೆಜಿಯಲ್ಲಿ ಓದುತ್ತಿದ್ದಾರೆ.


ಆಟೋ ಚಾಲಕ 27 ವರ್ಷದ ಉಮೇಶ್ ವಿರುದ್ಧ ಕುಡಿದು ವಾಹನ ಚಲಾಯಿಸಿದ ಕೇಸು ದಾಖಲಾಗಿದೆ. ಆತ ಯೂನಿಫಾರಂ ಧರಿಸಿರಲಿಲ್ಲ, ಚಾಲಕ ಪರವಾನಗಿ ಕೂಡ ಇರಲಿಲ್ಲ.


ಮಡಿವಾಳ ಸಂಚಾರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಯರಾಮು ಟಿ ಡಿ ಮತ್ತು ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಕುಗಟೊಲಿ ನಿನ್ನೆ ಮಧ್ಯಾಹ್ನ 12.50ರ ಸುಮಾರಿಗೆ ಬೊಮ್ಮನಹಳ್ಳಿ ಜಂಕ್ಷನ್ ನಲ್ಲಿ ಎಂದಿನ ಕಾರ್ಯ ನಿರ್ವಹಿಸುತ್ತಿದ್ದರು. ಆಗ ಇಬ್ಬರು ಬೈಕ್ ನಲ್ಲಿ ಬಂದು ಒಬ್ಬ ಆಟೋ ಚಾಲಕನು ವೇಗವಾಗಿ ಗಾಡಿ ಓಡಿಸುತ್ತಿದ್ದಾನೆ, ಅದರಲ್ಲಿ ಇಬ್ಬರು ಪುಟ್ಟ ಶಾಲಾ ಮಕ್ಕಳಿದ್ದಾರೆ ಎಂದು ಎಚ್ಚರಿಸಿದ್ದರು.


ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗಿ ಆಟೋವನ್ನು ಗುರುತಿಸಿ ಹಿಡಿದರು. ಯಾಕೆ ಇಷ್ಟೊಂದು ವೇಗವಾಗಿ ಗಾಡಿ ಓಡಿಸುತ್ತಿ ಎಂದು ಕೇಳಿದಾಗ ಅವನ ಬಾಯಿಯಿಂದ ಮದ್ಯದ ವಾಸನೆ ಬಂತು. ಕೂಡಲೇ ಆಟೊವನ್ನು ವಶಕ್ಕೆ ತೆಗೆದುಕೊಂಡು ತಪಾಸಣೆ ಮಾಡಿದರು. ಅನುಮತಿ ಮಿತಿಗಿಂತ ಹೆಚ್ಚು ಆತ ಮದ್ಯ ಸೇವಿಸಿದ್ದ. ಸ್ಥಳದಲ್ಲಿಯೇ ಆತನಿಗೆ ದಂಡವನ್ನು ಹಾಕಿದರು. 


ನಂತರ ಆಟೋದಿಂದ ಮಕ್ಕಳನ್ನು ಇಳಿಸಿ ಅವರ ಶಾಲಾ ಡೈರಿ ತೆಗೆದು ಅದರಲ್ಲಿ ಪೋಷಕರ ಫೋನ್ ನಂಬರ್ ಪಡೆದು ಕರೆ ಮಾಡಿದರು. ತಮ್ಮ ಮಕ್ಕಳನ್ನು ರಕ್ಷಿಸಿದ ಸಂಚಾರಿ ಪೊಲೀಸರಿಗೆ ಪೋಷಕರು ಧನ್ಯವಾದ ಹೇಳಿದರು.

SCROLL FOR NEXT