ರಾಜ್ಯ

ಬೆಳ್ಳಂಬೆಳಗ್ಗೆ ಸಂಚಲನ ಸೃಷ್ಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್, ಅಷ್ಟಕ್ಕೂ ಅದರಲ್ಲೇನಿತ್ತು?

Sumana Upadhyaya

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಡಿರುವ ಟ್ವೀಟ್ ಗುರುವಾರ ಬೆಳ್ಳಂಬೆಳಗ್ಗೆಯೇ ತೀವ್ರ ಸಂಚಲನ ಸೃಷ್ಟಿಸಿದೆ.


ಮೊನ್ನೆ ನಡೆದ ಮೂರು ದಿನಗಳ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯೆ ವಾಗ್ವಾದ ನಡೆದು ತೀವ್ರ ಸುದ್ದಿಯಾಗಿತ್ತು. ಮೊನ್ನೆ ಬಾಗಲಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಅವನ್ಯಾರೊ ಒಬ್ಬ ಪುಣ್ಯಾತ್ಮನನ್ನು ಸ್ಪೀಕರ್ ಮಾಡಿಬಿಟ್ಟಿದ್ದಾರೆ. ಅವನು ಹೊಸಬ, ಏನೂ ಗೊತ್ತಿಲ್ಲ ಎಂದು ಏಕವಚನದಲ್ಲಿಯೇ ತೆಗಳಿದ್ದರು.


ಇದಕ್ಕೆ ಇಂದು ಟ್ವೀಟ್ ಮೂಲಕ ತಿವಿದಿರುವ ಸಚಿವ ಸುರೇಶ್ ಕುಮಾರ್, ರಾಜ್ಯದ  ಪ್ರತಿಪಕ್ಷದ ನಾಯಕರು ವಿಧಾನಸಭೆಯ ಅಧಿವೇಶನ ಸಮಯದಲ್ಲಿ ಸದನದಲ್ಲಿಯಾದರೂ ಮಾನ್ಯ ಸಭಾಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸದಂತೆ ಬುದ್ದಿ ಕೊಡು ಎಂದು ಸಿದ್ದರಾಮಯ್ಯನವರ ಹೆಸರು ಹೇಳದೆಯೇ ತಿರುಗೇಟು ಕೊಟ್ಟಿದ್ದಾರೆ.


ಸುರೇಶ್ ಕುಮಾರ್ ಅವರ ಟ್ವೀಟ್ ಪ್ರಕಟವಾಗುತ್ತಿದ್ದಂತೆ ಜನರು ತರಹೇವಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಚಿವರು ಟ್ವೀಟ್ ಮಾಡಿದ ದಾಟಿಯಲ್ಲೇ ಒಬ್ಬರು, ಓ ದೇವರೇ ನಮ್ಮ ರಾಜಕಾರಣಿಗಳು ಕೇಂದ್ರದ ಮೇಲೆ ಒತ್ತಡ ಹಾಕಿ ಹೆಚ್ಚಿನ ನೆರೆ ಪರಿಹಾರ ತಂದು ಕೊಡುವಂತೆ ಬುದ್ದಿ ಕೊಡು..ನೆರೆ ಸಮಯದಲ್ಲಿ ರಾಜಕೀಯ ಮಾಡದಂತೆ ಮನಸು ಕೊಡು ಎಂದು ಕೇಳಿಕೊಂಡಿದ್ದಾರೆ.


ಮತ್ತೊಬ್ಬರು ಶಿಕ್ಷಣ ಇಲಾಖೆಯಲ್ಲಿ 71 ಸಾವಿರ ಶಿಕ್ಷಕ ಹುದ್ದೆ ಖಾಲಿಯಿದೆ ಎಂದು ಪತ್ರಿಕೆಯಲ್ಲಿ ಬಂದ ವರದಿಯನ್ನು ಟ್ವೀಟ್ ಮಾಡಿದ್ದಾರೆ. ಶಿಕ್ಷಣ ಇಲಾಖೆ, ಸರ್ಕಾರಕ್ಕೆ ಸಂಬಂಧಿಸಿದ ನೂರಾರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

SCROLL FOR NEXT