ರಾಜ್ಯ

ಸೇನೆ ಸೇರಲು ಅತ್ಯುತ್ಸಾಹ: ಬರೋಬ್ಬರಿ 41 ಸಾವಿರ ಯುವಕರ ನೋಂದಣಿ!

Nagaraja AB

ಕೊಪ್ಪಳ: ನವೆಂಬರ್ 5 ರಿಂದ 16ರವರೆಗೂ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಯುವಕರಿಂದ ಉತ್ತಮ ಪ್ರತ್ರಿಕ್ರಿಯೆ ಕಂಡುಬಂದಿದೆ.

ಸೇನೆಯಲ್ಲಿ ಸೇವೆ ಸಲ್ಲಿಸಲು ಈವರೆಗೂ  41 ಸಾವಿರಕ್ಕೂ ಹೆಚ್ಚು ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಳಗಾವಿ, ಬೀದರ್, ಕಲುಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಯುವಕರಿಗಾಗಿ ಈ ನೇಮಕಾತಿ  ರ‍್ಯಾಲಿ ​ ನಡೆಯಲಿದ್ದು, ಈ ಬಾರಿ ಯುವಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಐದು ವರ್ಷಗಳ ಹಿಂದೆ ಇಂತಹದ್ದೇ ರ‍್ಯಾಲಿ ​ ನಡೆಸಲಾಗಿತ್ತು. ಆಗ ಸೇನೆ ಸೇರಲು ಯಾರೂ ಕೂಡಾ ಮುಂದೆ ಬಂದಿರಲಿಲ್ಲ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ. 

ಆರು ಜಿಲ್ಲೆಗಳ ಯುವಕರಿಗಾಗಿ ಕೊಪ್ಪಳ ಜಿಲ್ಲಾಡಳಿತದಿಂದ ಸೇನಾ ನೇಮಕಾತಿ ರ‍್ಯಾಲಿ ​ ನಡೆಸಲಾಗುತ್ತಿದ್ದು, ಸೇನೆಯ ಕೆಲ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸುಶೀಲ್ ಕುಮಾರ್ ಪೂರ್ವಭಾವಿ ಸಭೆ ನಡೆಸಿದರು. 

ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾ ಕ್ರೀಡಾಂಗಣದವರೆಗೂ ಉಚಿತ ನಗರ ಸಾರಿಗೆ, ವಸತಿ ಸೇರಿದಂತೆ ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು, ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುವುದು, ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

SCROLL FOR NEXT